ಚೀನಾದಲ್ಲಿ ಭೂಕುಸಿತ; ಕನಿಷ್ಠ 8 ಮಂದಿ ಸಾವು
500ಕ್ಕೂ ಅಧಿಕ ಜನರ ಸ್ಥಳಾಂತರ
Photo:NDTV
ಬೀಜಿಂಗ್ : ಚೀನಾದ ನೈಋತ್ಯ ಪ್ರಾಂತ ಯುನಾನ್ನಲ್ಲಿ ನಡೆದ ಭೀಕರ ಭೂಕುಸಿತದಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು ಹಲವರು ನಾಪತ್ತೆಯಾಗಿದ್ದಾರೆ. 500ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
ಯುನಾನ್ನ ಪರ್ವತ ಪ್ರದೇಶದಲ್ಲಿರುವ ಝಾವೊಟಾಂಗ್ ನಗರದಲ್ಲಿ ಸೋಮವಾರ ಬೆಳಿಗ್ಗೆ ಸ್ಥಳೀಯ ಕಾಲಮಾನ 5:51ಕ್ಕೆ ಭೂಕುಸಿತ ಸಂಭವಿಸಿದಾಗ 47 ಮಂದಿ ಕಲ್ಲುಮಣ್ಣಿನ ರಾಶಿಯಡಿ ಸಿಲುಕಿದ್ದರು ಎಂದು ಬಿಬಿಸಿ ವರದಿ ಮಾಡಿದೆ. ಭೂಕುಸಿತಕ್ಕೆ ಕಾರಣ ತಿಳಿದುಬಂದಿಲ್ಲ. ಮೈ ಕೊರೆಯುವ ಚಳಿಯ ನಡುವೆಯೂ ತ್ವರಿತ ಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಅಧ್ಯಕ್ಷ ಕ್ಸಿಜಿಂಪಿಂಗ್ ಆದೇಶಿಸಿದ್ದಾರೆ.
ಸುಮಾರು 1000 ರಕ್ಷಣಾ ಕಾರ್ಯಕರ್ತರನ್ನು ರವಾನಿಸಲಾಗಿದ್ದು 500ಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 8 ಮಂದಿಯ ಮೃತದೇಹ ಪತ್ತೆಯಾಗಿದ್ದು ಸುಮಾರು 40 ಮಂದಿ ನಾಪತ್ತೆಯಾಗಿರುವ ಮಾಹಿತಿಯಿದೆ. ರಕ್ಷಣಾ ಕಾರ್ಯಾಚರಣೆಗೆ ಚೀನಾದ ಉಪಪ್ರೀಮಿಯರ್ ಝಾಂಗ್ ಗುವಾಕ್ವಿಂಗ್ ಮಾರ್ಗದರ್ಶನ ನೀಡುತ್ತಿರುವುದಾಗಿ ವರದಿಯಾಗಿದೆ.