ನೇಪಾಳದಲ್ಲಿ ಭೂಕುಸಿತ | ಮೂವರು ಮಕ್ಕಳ ಸಹಿತ 9 ಮಂದಿ ಮೃತ್ಯು
ಕಠ್ಮಂಡು: ಪಶ್ಚಿಮ ನೇಪಾಳದಲ್ಲಿ ನಿರಂತರ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದ್ದು ಮೂವರು ಮಕ್ಕಳ ಸಹಿತ 9 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.
ಕಠ್ಮಂಡುವಿನಿಂದ ಸುಮಾರು 250 ಕಿ.ಮೀ ಪಶ್ಚಿಮದಲ್ಲಿರುವ ಗುಲ್ಮಿ ಜಿಲ್ಲೆಯ ಮಲಿಕಾ ಗ್ರಾಮದಲ್ಲಿ ಭೂಕುಸಿತದಿಂದಾಗಿ ಮನೆಯೊಂದು ನೆಲಸಮಗೊಂಡಿದ್ದು ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ಐದು ಮಂದಿ ಮತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಪಾರುಗಾಣಿಕೆ ಮತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರರು ಹೇಳಿದ್ದಾರೆ. ನೆರೆಯ ಸಯಾಂಗ್ಜಾ ಜಿಲ್ಲೆಯಲ್ಲಿ ಭೂಕುಸಿತದಿಂದ ಮನೆಯೊಂದು ಹೂತುಹೋಗಿದ್ದು ಮಹಿಳೆ ಮತ್ತು 3 ವರ್ಷದ ಬಾಲಕಿ ಮತಪಟ್ಟಿದ್ದಾರೆ. ಗುಲ್ಮಿಯ ಗಡಿಭಾಗದಲ್ಲಿರುವ ಬಗ್ಲುಂಗ್ ಜಿಲ್ಲೆಯಲ್ಲಿ ಭೂಕುಸಿತದಿಂದ ಇಬ್ಬರು ಮತಪಟ್ಟಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನೇಪಾಳದಲ್ಲಿ ವಾರ್ಷಿಕ ಮುಂಗಾರು ಆರಂಭಗೊಂಡ ಜೂನ್ ಮಧ್ಯಭಾಗದಿಂದ ಪ್ರವಾಹ, ಭೂಕುಸಿತ, ಸಿಡಿಲಿನಿಂದ ಕನಿಷ್ಠ 35 ಮಂದಿ ಮತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.