ಕೃತಕ ಬುದ್ಧಿಮತ್ತೆ ಬಳಕೆ ನಿಯಂತ್ರಣಕ್ಕೆ ಕಾನೂನು : ಇಯು ನಿರ್ಧಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬ್ರಸೆಲ್ಸ್: ಬಯೊಮೆಟ್ರಿಕ್ ಕಣ್ಗಾವಲು ಮತ್ತು ಚಾಟ್ಜಿಪಿಟಿಯಂತಹ ಕೃತಕ ಬುದ್ಧಿಮತ್ತೆ(ಎಐ) ವ್ಯವಸ್ಥೆಗಳನ್ನು ನಿಯಂತ್ರಿಸುವುದು ಸೇರಿದಂತೆ ಎಐ ಬಳಕೆಯನ್ನು ನಿಯಂತ್ರಿಸುವ ಮಹತ್ವದ ಕಾನೂನು ಕುರಿತು ಯುರೋಪಿಯನ್ ಯೂನಿಯನ್ ಸದಸ್ಯ ದೇಶಗಳು ತಾತ್ಕಾಲಿಕ ಒಪ್ಪಂದವನ್ನು ಅಂಗೀಕರಿಸಿದೆ.
ಈ ರಾಜಕೀಯ ಒಪ್ಪಂದದೊಂದಿಗೆ ಎಐ ಅನ್ನು ನಿಯಂತ್ರಿಸುವ ಕಾನೂನು ಜಾರಿಗೊಳಿಸುವ ಮೊದಲ ಪ್ರಮುಖ ಜಾಗತಿಕ ಶಕ್ತಿಯಾಗುವತ್ತ ಯುರೋಪಿಯನ್ ಯೂನಿಯನ್ ಹೆಜ್ಜೆ ಇರಿಸಿದೆ. ಯುರೋಪಿಯನ್ ಸಂಸತ್ ನಲ್ಲಿ ಸುಮಾರು 24 ಗಂಟೆ ನಡೆದ ಚರ್ಚೆಯ ಬಳಿಕ ಇಯು ದೇಶಗಳು ಹಾಗೂ ಇಯು ಸಂಸತ್ ಸದಸ್ಯರ ನಡುವಿನ ಒಪ್ಪಂದಕ್ಕೆ ಸಹಮತ ಮೂಡಿದೆ. ಮುಂದಿನ ದಿನಗಳಲ್ಲಿ ಕೆಲವು ತಿದ್ದುಪಡಿ ಅಥವಾ ಸೇರ್ಪಡೆಯ ನಿರೀಕ್ಷೆಯಿದ್ದು ಬಳಿಕ ಎರಡೂ ಕಡೆಯವರು ಅಂತಿಮ ಶಾಸನವನ್ನು ರೂಪಿಸಲಿದ್ದಾರೆ.
‘ಯುರೋಪ್ ತನ್ನನ್ನು ಪ್ರವರ್ತಕನಾಗಿ ಇರಿಸಿಕೊಂಡಿದ್ದು ಜಾಗತಿಕ ಗುಣಮಟ್ಟದ ನೇತಾರನಾಗಿ ತನ್ನ ಮಹತ್ವವನ್ನು ಅರಿತುಕೊಂಡಿದೆ. ಇದು ಖಂಡಿತವಾಗಿಯೂ ಐತಿಹಾಸಿಕ ದಿನವಾಗಿದೆ’ ಎಂದು ಯುರೋಪಿಯನ್ ಕಮಿಷನರ್ ಥಿಯರ್ರಿ ಬ್ರೆಟನ್ ಬ್ರಸೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಚಾಟ್ಜಿಪಿಟಿ, ಸಾಮಾನ್ಯ ಉದ್ದೇಶದ ಎಐ ವ್ಯವಸ್ಥೆಗಳಂತಹ ಮೂಲ ಮಾದರಿಗಳನ್ನು ಮಾರುಕಟ್ಟೆಗೆ ತಲುಪಿಸುವ ಮುನ್ನ ಅವುಗಳು ಪಾರದರ್ಶಕತೆ ಕಟ್ಟುಪಾಡುಗಳನ್ನು ಅನುಸರಿಸುವ ಅಗತ್ಯವಿದೆ. ತಾಂತ್ರಿಕ ದಾಖಲಾತಿಗಳನ್ನು ರೂಪಿಸುವುದು, ಇಯು ಹಕ್ಕುಸ್ವಾಮ್ಯ ಕಾನೂನನ್ನು ಅನುಸರಿಸುವುದು ಮತ್ತು ತರಬೇತಿಗಾಗಿ ಬಳಸಿದ ವಿಷಯಗಳ ಬಗ್ಗೆ ವಿವರವಾದ ಸಾರಾಂಶವನ್ನು ಪ್ರಸಾರ ಮಾಡುವ ಬಗ್ಗೆ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಅಪರಾಧಗಳ ಸಂತ್ರಸ್ತರ ಪ್ರಕರಣಗಳು, ಭಯೋತ್ಪಾದಕ ದಾಳಿಯಂತಹ ನಿಶ್ಚಿತ, ಪ್ರಸ್ತುತ ಅಥವಾ ನಿರೀಕ್ಷಿತ ಬೆದರಿಕೆಗಳ ತಡೆಗಟ್ಟುವಿಕೆ, ಗಂಭೀರ ಅಪರಾಧ ಪ್ರಕರಣಗಳ ಶಂಕಿತರ ಪತ್ತೆಕಾರ್ಯದಲ್ಲಿ ಸರಕಾರಗಳು ಬಯೊಮೆಟ್ರಿಕ್ ಕಣ್ಗಾವಲು ವ್ಯವಸ್ಥೆ ಬಳಸಬಹುದು.