ಲೆಬನಾನ್ನಿಂದ ಸೇನೆ ಹಿಂಪಡೆಯಲು ಹೆಚ್ಚುವರಿ ಕಾಲಾವಕಾಶಕ್ಕೆ ಇಸ್ರೇಲ್ ಆಗ್ರಹ
ಪಟ್ಟು ಸಡಿಲಿಸದ ಲೆಬನಾನ್

PC : NDTV
ಜೆರುಸಲೇಂ: ಹಿಜ್ಬುಲ್ಲಾ ಜತೆಗಿನ ಕದನ ವಿರಾಮ ಒಪ್ಪಂದದ ಪ್ರಕಾರ ದಕ್ಷಿಣ ಲೆಬನಾನ್ ನಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು 30 ದಿನಗಳ ಹೆಚ್ಚುವರಿ ಕಾಲಾವಕಾಶದ ಅಗತ್ಯವಿದೆ ಎಂದು ಇಸ್ರೇಲ್ ಸರಕಾರ ಹೇಳಿದೆ.
2024ರ ನವೆಂಬರ್ 27ರಂದು ಜಾರಿಗೆ ಬಂದ ಇಸ್ರೇಲ್-ಹಿಜ್ಬುಲ್ಲಾ ಕದನ ವಿರಾಮ ಒಪ್ಪಂದದ ಪ್ರಕಾರ,. ಒಪ್ಪಂದ ಜಾರಿಗೆ ಬಂದ 60 ದಿನಗಳೊಳಗೆ ದಕ್ಷಿಣ ಲೆಬನಾನ್ನಲ್ಲಿರುವ ತನ್ನ ಸೇನಾ ನೆಲೆಗಳನ್ನು ಜನವರಿ 26ರ ಒಳಗೆ ಲೆಬನಾನ್ ಸಶಸ್ತ್ರ ಪಡೆಗಳಿಗೆ ಬಿಟ್ಟುಕೊಟ್ಟು ಇಸ್ರೇಲ್ ಪಡೆಗಳು ವಾಪಸಾಗಬೇಕು. ಜತೆಗೆ ಹಿಜ್ಬುಲ್ಲಾ ಗುಂಪು ಇಸ್ರೇಲ್-ಲೆಬನಾನ್ ಗಡಿಗಿಂತ ಸುಮಾರು 30 ಕಿ.ಮೀ ಹಿಂದಕ್ಕೆ ಸರಿಯಬೇಕು.
ಆದರೆ ಈ ಗಡುವು ಪೂರ್ಣಗೊಳ್ಳಲು ಒಂದು ದಿನ ಮಾತ್ರ ಬಾಕಿಯಿದ್ದು ಸೇನೆಯ ವಾಪಸಾತಿ ವಿಷಯದಲ್ಲಿ ಮಾಡಬೇಕಿರುವ ಕಾರ್ಯ ಇನ್ನೂ ಬಹಳಷ್ಟಿದೆ. ಜತೆಗೆ, ಹಿಜ್ಬುಲ್ಲಾ ಗುಂಪು ಕೂಡಾ ನಿಧಾನವಾಗಿ ಹಿಂದೆ ಸರಿಯುತ್ತಿದೆ. ಆದ್ದರಿಂದ ಹೆಚ್ಚುವರಿ 30 ದಿನಗಳ ಕಾಲಾವಕಾಶ ಅಗತ್ಯವಿದೆ ಎಂದು ಕದನ ವಿರಾಮ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಮೆರಿಕಕ್ಕೆ ಇಸ್ರೇಲ್ ಕೋರಿಕೆ ಸಲ್ಲಿಸಿದೆ ಎಂದು ವರದಿಯಾಗಿದೆ.
ಈ ಮಧ್ಯೆ, ನಿಗದಿತ ಗಡುವಿನ ಒಳಗೆ ದಕ್ಷಿಣ ಲೆಬನಾನ್ನಿಂದ ಇಸ್ರೇಲ್ ಪಡೆ ವಾಪಸಾಗಬೇಕು ಎಂದು ಹಿಜ್ಬುಲ್ಲಾ ಪಟ್ಟು ಹಿಡಿದಿದೆ.