ಲೆಬನಾನ್ | ಇಸ್ರೇಲಿ ಪಡೆಗಳ ಉಪಸ್ಥಿತಿ ವಿರುದ್ಧ ಪ್ರತಿಭಟನೆ ; ಇಸ್ರೇಲ್ ದಾಳಿಯಲ್ಲಿ 11 ಮಂದಿ ಮೃತ್ಯು

PC : aljazeera.com
ಬೈರೂತ್: ಲೆಬನಾನ್ ಕದನವಿರಾಮ ಒಪ್ಪಂದದ ಪ್ರಕಾರ 60 ದಿನಗಳ ನಿಗದಿತ ಗಡುವಿನೊಳಗೆ ದಕ್ಷಿಣ ಲೆಬನಾನ್ ನಿಂದ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಇಸ್ರೇಲ್ ವಿಫಲವಾಗಿರುವುದನ್ನು ಖಂಡಿಸಿ ಗಡಿಭಾಗದ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದೆ.
ಶನಿವಾರ ಇಸ್ರೇಲ್ ಪಡೆ ನಿರ್ಮಿಸಿದ್ದ ರಸ್ತೆತಡೆಯನ್ನು ಮುರಿದು ತಮ್ಮ ಮನೆಗೆ ಹಿಂತಿರುಗಲು ನೂರಾರು ಜನರು ಮುಂದಾದಾಗ ಅವರನ್ನು ಇಸ್ರೇಲ್ ಸೇನೆ ತಡೆದಿದೆ. ಈ ಸಂದರ್ಭ ಪ್ರತಿಭಟನಾಕಾರರ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 10 ನಿವಾಸಿಗಳು ಹಾಗೂ ಲೆಬನಾನ್ ಸೈನಿಕ ಮೃತಪಟ್ಟಿದ್ದು 83ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಓರ್ವ ಯೋಧನೂ ಸೇರಿದ್ದಾನೆ ಎಂದು ಲೆಬನಾನ್ ನ ಆರೋಗ್ಯ ಇಲಾಖೆ ವರದಿ ಮಾಡಿದೆ.
ಹಿಜ್ಬುಲ್ಲಾ ಜತೆಗಿನ ಕದನ ವಿರಾಮ ಒಪ್ಪಂದದ ಪ್ರಕಾರ ದಕ್ಷಿಣ ಲೆಬನಾನ್ ನಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು 30 ದಿನಗಳ ಹೆಚ್ಚುವರಿ ಕಾಲಾವಕಾಶದ ಅಗತ್ಯವಿದೆ ಎಂದು ಇಸ್ರೇಲ್ ಸರಕಾರ ಹೇಳಿದೆ.
2024ರ ನವೆಂಬರ್ 27ರಂದು ಜಾರಿಗೆ ಬಂದ ಇಸ್ರೇಲ್-ಹಿಜ್ಬುಲ್ಲಾ ಕದನ ವಿರಾಮ ಒಪ್ಪಂದದ ಪ್ರಕಾರ, ಒಪ್ಪಂದ ಜಾರಿಗೆ ಬಂದ 60 ದಿನಗಳೊಳಗೆ, ಅಂದರೆ ಜನವರಿ 27ರ ಒಳಗೆ ದಕ್ಷಿಣ ಲೆಬನಾನ್ ನಲ್ಲಿರುವ ತನ್ನ ಸೇನಾ ನೆಲೆಗಳನ್ನು ಲೆಬನಾನ್ ಸಶಸ್ತ್ರ ಪಡೆಗಳಿಗೆ ಬಿಟ್ಟುಕೊಟ್ಟು ಇಸ್ರೇಲ್ ಪಡೆಗಳು ವಾಪಸಾಗಬೇಕು. ಜತೆಗೆ ಹಿಜ್ಬುಲ್ಲಾ ಗುಂಪು ಇಸ್ರೇಲ್-ಲೆಬನಾನ್ ಗಡಿಗಿಂತ ಸುಮಾರು 30 ಕಿ.ಮೀ ಹಿಂದಕ್ಕೆ ಸರಿಯಬೇಕು.
ಆದರೆ ಈ ಗಡುವಿನ ಒಳಗೆ ಪಡೆಯ ವಾಪಸಾತಿ ಅಸಾಧ್ಯವಾಗಿದೆ. ಈ ವಿಷಯದಲ್ಲಿ ಮಾಡಬೇಕಿರುವ ಕಾರ್ಯ ಇನ್ನೂ ಬಹಳಷ್ಟಿದೆ. ಜತೆಗೆ, ಹಿಜ್ಬುಲ್ಲಾ ಗುಂಪು ಕೂಡಾ ನಿಧಾನವಾಗಿ ಹಿಂದೆ ಸರಿಯುತ್ತಿದೆ. ಆದ್ದರಿಂದ ಹೆಚ್ಚುವರಿ 30 ದಿನಗಳ ಕಾಲಾವಕಾಶ ಅಗತ್ಯವಿದೆ ಎಂದು ಕದನ ವಿರಾಮ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಮೆರಿಕಕ್ಕೆ ಇಸ್ರೇಲ್ ಕೋರಿಕೆ ಸಲ್ಲಿಸಿರುವುದಾಗಿ ವರದಿಯಾಗಿದೆ.
ಇಸ್ರೇಲಿ ಮಿಲಿಟರಿಯ ಉಪಸ್ಥಿತಿ ಮುಂದುವರಿದಿರುವಂತೆಯೇ ನೂರಾರು ಜನರನ್ನು ಹೊತ್ತ(ಹಿಜ್ಬುಲ್ಲಾದ ಹಸಿರು ಧ್ವಜವನ್ನು ಹೊಂದಿದ್ದ) ವಾಹನಗಳ ಸಾಲು ದಕ್ಷಿಣ ಲೆಬನಾನ್ ನ ಹಲವಾರು ಗ್ರಾಮಗಳತ್ತ ಸಾಗುತ್ತಿರುವುದಾಗಿ ಎಎಫ್ಪಿ ವರದಿ ಮಾಡಿದೆ.
ನಮ್ಮ ಜೀವ ಹೋದರೂ ಸರಿ, ನಾವು ನಮ್ಮ ಗ್ರಾಮಗಳಿಗೆ ಹಿಂತಿರುಗುತ್ತೇವೆ ಮತ್ತು ಇಸ್ರೇಲಿ ಶತ್ರುಗಳು ನಿರ್ಗಮಿಸುತ್ತಾರೆ ಎಂದು ವಾಹನದಲ್ಲಿದ್ದವರು ಘೋಷಣೆ ಕೂಗುತ್ತಿದ್ದರು. ಕೆಲವರು ಕಾಲ್ನಡಿಗೆಯಲ್ಲಿ ಮತ್ತು ಮೋಟಾರು ಬೈಕಿನ ಮೂಲಕ ವಿನಾಶಗೊಂಡ ಗಡಿಪಟ್ಟಣವಾದ ಮೇಸ್ ಅಲ್-ಜಬಲ್ ಕಡೆಗೆ(ಇಲ್ಲಿ ಇಸ್ರೇಲ್ ಪಡೆಯ ಉಪಸ್ಥಿತಿ ಮುಂದುವರಿದಿದೆ) ಹೋಗುತ್ತಿರುವುದಾಗಿ ಲೆಬನಾನ್ ಸೇನೆ ಹೇಳಿದೆ. ಕೆಲವರು ಹತ್ಯೆಗೀಡಾದ ಹಿಜ್ಬುಲ್ಲಾ ಮುಖಂಡ ಹಸನ್ ನಸ್ರಲ್ಲಾ ಅವರ ಭಾವಚಿತ್ರಗಳನ್ನು ಎತ್ತಿಹಿಡಿದಿದ್ದರೆ, ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ಮಹಿಳೆಯರು ಯುದ್ದದಲ್ಲಿ ಕೊಲ್ಲಲ್ಪಟ್ಟ ಕುಟುಂಬದ ಸದಸ್ಯರ ಭಾವಚಿತ್ರಗಳನ್ನು ಹಿಡಿದಿದ್ದರು.
ಈ ಮಧ್ಯೆ, ಈಗಲೇ ಹಿಂದಿರುಗಬೇಡಿ ಎಂದು ದಕ್ಷಿಣ ಲೆಬನಾನ್ ನ 60ಕ್ಕೂ ಹೆಚ್ಚು ಗ್ರಾಮಗಳ ನಿವಾಸಿಗಳನ್ನು ಇಸ್ರೇಲಿ ಮಿಲಿಟರಿ ವಕ್ತಾರ ಅವಿಚೆ ಅಡ್ರೀ ಆಗ್ರಹಿಸಿದ್ದಾರೆ. `ಬೆದರಿಕೆ ಮತ್ತು ಎಚ್ಚರಿಕೆಗಳ ಹೊರತಾಗಿಯೂ ನಿವಾಸಿಗಳು ಮರಳುತ್ತಿರುವುದನ್ನು ಶ್ಲಾಘಿಸುವುದಾಗಿ' ಹಿಜ್ಬುಲ್ಲಾ ಸಂಸದ(ಲೆಬನಾನ್ ಸಂಸತ್ ಸದಸ್ಯ) ಹಸನ್ ಫಡ್ಲಲ್ಲಾ ಹೇಳಿದ್ದಾರೆ. `ಸ್ವಲ್ಪ ತಾಳ್ಮೆ ವಹಿಸಿ ಮತ್ತು ಲೆಬನಾನ್ ಸೇನೆಯ ಮೇಲೆ ವಿಶ್ವಾಸವಿಡಿ. ನಿಮ್ಮ ಗ್ರಾಮಗಳು ಹಾಗೂ ಮನೆಗಳಿಗೆ ಮರಳುವುದನ್ನು ನಾವು ಖಾತರಿಪಡಿಸುತ್ತೇವೆ' ಎಂದು ಲೆಬನಾನ್ ಅಧ್ಯಕ್ಷ ಜೋಸೆಫ್ ಅವುನ್ ದಕ್ಷಿಣ ಲೆಬನಾನ್ ನಿವಾಸಿಗಳಿಗೆ ಕರೆ ನೀಡಿದ್ದಾರೆ.
ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನ್ ನ ಕರಾವಳಿ ಪ್ರದೇಶದಿಂದ ನಿರ್ಗಮಿಸಿವೆ. ಆದರೆ ಪೂರ್ವ ಪ್ರಾಂತದಲ್ಲಿ ಉಪಸ್ಥಿತಿ ಮುಂದುವರಿದಿದೆ. ಲೆಬನಾನ್ ಸರಕಾರ ಒಪ್ಪಂದವನ್ನು ಪೂರ್ಣವಾಗಿ ಜಾರಿಗೊಳಿಸಿಲ್ಲ. ಆದ್ದರಿಂದ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆ ರವಿವಾರದ ಗಡುವನ್ನು ಮೀರಿ ಮುಂದುವರಿಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇಸ್ರೇಲ್ ನಿರ್ಗಮಿಸಿದ ತಕ್ಷಣ ತನ್ನ ನಿಯೋಜನೆಯನ್ನು ಮುಂದುವರಿಸಲು ಸಿದ್ಧವಾಗಿರುವುದಾಗಿ ಲೆಬನಾನ್ ಸೇನೆ ಹೇಳಿದೆ.
►ಇಸ್ರೇಲ್ ಮೇಲೆ ಒತ್ತಡ ಹೇರಲು ಲೆಬನಾನ್ ಆಗ್ರಹ
ಕದನ ವಿರಾಮ ಒಪ್ಪಂದದ ಬೆಂಬಲಿಗರು(ಅಮೆರಿಕ, ಫ್ರಾನ್ಸ್ ಸೇರಿದಂತೆ) ದಕ್ಷಿಣ ಲೆಬನಾನ್ ನಿಂದ ತಕ್ಷಣ ಹಿಂದೆ ಸರಿಯುವಂತೆ ಇಸ್ರೇಲ್ ಮೇಲೆ ಒತ್ತಡ ಹಾಕಬೇಕು ಎಂದು ಲೆಬನಾನ್ ನ ಉಸ್ತುವಾರಿ ಪ್ರಧಾನಿ ನಜೀಬ್ ಮಿಕಾತಿ ರವಿವಾರ ಆಗ್ರಹಿಸಿದ್ದಾರೆ.
ನವೆಂಬರ್ ನಲ್ಲಿ ನಡೆದ ಒಪ್ಪಂದದಲ್ಲಿ ರೂಪಿಸಲಾದ ಗಡುವನ್ನು ತಲುಪಿಲ್ಲ. ರವಿವಾರ ಬೆಳಗ್ಗಿನ ಸ್ಥಿತಿಯನ್ನು ಗಮನಿಸಿದಾಗ ಗಡಿಭಾಗದ ಉದ್ದಕ್ಕೂ ಇರುವ ತಮ್ಮ ಗ್ರಾಮಗಳಿಗೆ ನಿವಾಸಿಗಳ ಸುರಕ್ಷಿತ ಮರಳುವಿಕೆಗೆ ಸೂಕ್ತ ಪರಿಸ್ಥಿತಿ ಕಾಣಿಸುತ್ತಿಲ್ಲ' ಎಂದು ಲೆಬನಾನ್ಗೆ ವಿಶ್ವಸಂಸ್ಥೆಯ ವಿಶೇಷ ಸಂಯೋಜಕರು ಹೇಳಿದ್ದಾರೆ.