ಲೆಬನಾನ್ ಕದನ ವಿರಾಮ ಉಲ್ಲಂಘನೆ : ಇಸ್ರೇಲ್ ಆರೋಪ
ಶೆಲ್ ದಾಳಿ ನಡೆಸಿದ ಇಸ್ರೇಲ್ ; ಇಬ್ಬರಿಗೆ ಗಾಯ
PC : aljazeera.com
ಬೈರೂತ್ : ದಕ್ಷಿಣ ಲೆಬನಾನ್ ನ ಹಲವು ಪ್ರದೇಶಗಳಲ್ಲಿ ಶಂಕಿತರ ಉಪಸ್ಥಿತಿಯನ್ನು ಪತ್ತೆಹಚ್ಚಿದ್ದು ಇದು ಹಿಜ್ಬುಲ್ಲಾ ಜತೆಗಿನ ಕದನ ವಿರಾಮದ ಉಲ್ಲಂಘನೆಯಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ದಕ್ಷಿಣ ವಲಯಕ್ಕೆ ಹಲವು ಶಂಕಿತರು ವಾಹನದಲ್ಲಿ ಆಗಮಿಸಿದ್ದಾರೆ. ಇದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದ್ದು ಶಂಕಿತರನ್ನು ತಡೆಯಲು ಟ್ಯಾಂಕ್ಗಳು ದಾಳಿ ನಡೆಸಿವೆ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಮೂಲಗಳು ಹೇಳಿವೆ.
ಕದನ ವಿರಾಮ ಬುಧವಾರ ಜಾರಿಗೆ ಬಂದೊಡನೆ, 14 ತಿಂಗಳಿಂದ ಮುಂದುವರಿದಿದ್ದ ಸಂಘರ್ಷದಿಂದಾಗಿ ಗಡಿ ಭಾಗದ ಪ್ರದೇಶದಿಂದ ಸ್ಥಳಾಂತರಗೊಂಡಿದ್ದ ನಿವಾಸಿಗಳು ತಮ್ಮ ಮನೆಯತ್ತ ಧಾವಿಸಿದ್ದರು. ಆದರೆ `ಸುರಕ್ಷತೆಯ ದೃಷ್ಟಿಯಿಂದ ಈಗಲೇ ಮನೆಯತ್ತ ಹಿಂತಿರುಗಬಾರದು' ಎಂದು ಇಸ್ರೇಲ್ ಮಿಲಿಟರಿ ಗಡಿಭಾಗದ ನಿವಾಸಿಗಳನ್ನು ಆಗ್ರಹಿಸಿತ್ತು.
ಲೆಬನಾನ್ನ ಜನರು ತಮ್ಮ ಮನೆಯತ್ತ ಹಿಂತಿರುಗಲು ಕಾತರರಾಗಿದ್ದಾರೆ. ಆದರೆ ಗಡಿಯ ಬಳಿ, ಲೆಬನಾನ್ ಪ್ರದೇಶದೊಳಗೆ ಈಗಲೂ ಇಸ್ರೇಲ್ ಪಡೆ ನಿಯೋಜನೆಗೊಂಡಿದ್ದು, ದಕ್ಷಿಣ ಲೆಬನಾನ್ನ ಕೆಲವು ಭಾಗಗಳಲ್ಲಿ ಕಣ್ಗಾವಲು ಡ್ರೋನ್ಗಳು ಹಾರಾಟ ನಡೆಸುತ್ತಿವೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಇದಕ್ಕೂ ಮುನ್ನ, ಲೆಬನಾನ್-ಇಸ್ರೇಲ್ ನಡುವಿನ ಆಗ್ನೇಯ ಗಡಿಭಾಗದಲ್ಲಿ ಹಲವು ನಗರಗಳನ್ನು ಗುರಿಯಾಗಿಸಿ ಇಸ್ರೇಲ್ ಟ್ಯಾಂಕ್ ಶೆಲ್ ದಾಳಿ ನಡೆಸಿದೆ. ಆಕ್ರಮಣಕಾರಿ ಮಿಲಿಟರಿ ಕಾರ್ಯಾಚರಣೆಯನ್ನು ನಿಷೇಧಿಸುವ ಕದನ ವಿರಾಮ ಒಪ್ಪಂದ ಅಧಿಕೃತವಾಗಿ ಜಾರಿಗೊಂಡ ಮರುದಿನ ಈ ದಾಳಿ ನಡೆದಿದೆ ಎಂದು ಲೆಬನಾನ್ನ ಭದ್ರತಾ ಮೂಲಗಳು ಹೇಳಿವೆ. ಗಡಿಭಾಗದ ಮರ್ಕಾಬ, ವಝಾನಿ, ಕಫರ್ಚೌಬ, ಖಿಯಾಮ್, ತಯ್ಬೆ ನಗರಗಳು ಹಾಗೂ ಲೆಬನಾನ್-ಇಸ್ರೇಲ್ ಗಡಿಭಾಗದ 2 ಕಿ.ಮೀ ದೂರದಲ್ಲಿರುವ ಮಾರ್ಜಯೂನ್ ನಗರದ ಸುತ್ತಲಿನ ಕೃಷಿ ಪ್ರದೇಶದ ಮೇಲೆ ಇಸ್ರೇಲ್ ಟ್ಯಾಂಕ್ ದಾಳಿ ನಡೆದಿದ್ದು ಇಬ್ಬರು ಗಾಯಗೊಂಡಿದ್ದಾರೆ.
►ಲೆಬನಾನ್ ಸೇನೆ ನಿಯೋಜನೆ
ದಕ್ಷಿಣ ಲೆಬನಾನ್ನಾದ್ಯಂತ ಲೆಬನಾನ್ ಮಿಲಿಟರಿ ಗುರುವಾರ ತನ್ನ ಪಡೆಗಳು ಹಾಗೂ ಟ್ಯಾಂಕ್ಗಳನ್ನು ನಿಯೋಜಿಸಿದೆ. ಲಿಟಾನಿ ನದಿಯ ದಕ್ಷಿಣದಲ್ಲಿ ತನ್ನ ಪಡೆಗಳು ಚೆಕ್ಪಾಯಿಂಟ್ಗಳನ್ನು ಸ್ಥಾಪಿಸುತ್ತಿವೆ ಮತ್ತು ಗಸ್ತು ನಡೆಸುತ್ತಿವೆ. ಆದರೆ ಇಸ್ರೇಲ್ ಪಡೆಗಳ ಉಪಸ್ಥಿತಿ ಇರುವ ಪ್ರದೇಶದಿಂದ ತನ್ನ ಪಡೆ ಅಂತರ ಕಾಯ್ದುಕೊಂಡಿದೆ ಎಂದು ಲೆಬನಾನ್ ಸೇನೆಯ ಮೂಲಗಳು ಹೇಳಿವೆ. ಗಡಿ ಗ್ರಾಮವಾದ ಕ್ಲಾಯಾದಲ್ಲಿ ನಿವಾಸಿಗಳು ಅಕ್ಕಿ ಮತ್ತು ಹೂಗಳನ್ನು ಎರಚಿ ಲೆಬನಾನ್ನ ಯೋಧರನ್ನು ಸ್ವಾಗತಿಸಿದರು.
ದಕ್ಷಿಣ ಲೆಬನಾನ್ನಲ್ಲಿ ಲೆಬನಾನ್ ಸೇನೆಯ ನಿಯೋಜನೆಗೆ ಹಿಜ್ಬುಲ್ಲಾ ಸಹಕರಿಸುತ್ತದೆ ಎಂದು ಹಿಜ್ಬುಲ್ಲಾ ಸಂಸದ ಹಸನ್ ಫದ್ಲಲ್ಲಾ ಹೇಳಿದ್ದಾರೆ.