ಲೆಬನಾನ್ | ಇಸ್ರೇಲ್ನ 4 ಯೋಧರ ಸಾವು
PC : X
ಬೈರುತ್ : ಲೆಬನಾನ್ ರಾಜಧಾನಿ ಬೈರುತ್ ನ ದಕ್ಷಿಣ ಪ್ರದೇಶದ ಮೇಲೆ ಶನಿವಾರ ತಡರಾತ್ರಿ ಇಸ್ರೇಲ್ ಪಡೆ ಆಕ್ರಮಣ ತೀವ್ರಗೊಳಿಸಿದ್ದು ತಕ್ಷಣ ಸ್ಥಳಾಂತರಗೊಳ್ಳುವಂತೆ ಸ್ಥಳೀಯರಿಗೆ ಸೂಚಿಸಿದೆ ಎಂದು ಲೆಬನಾನ್ ಸರಕಾರಿ ಸ್ವಾಮ್ಯದ `ನ್ಯಾಷನಲ್ ನ್ಯೂಸ್ ಏಜೆನ್ಸಿ' ರವಿವಾರ ವರದಿ ಮಾಡಿದೆ.
ಬೈರುತ್ ನ ದಕ್ಷಿಣ ಉಪನಗರಗಳ ನಿವಾಸಿಗಳು ತಮ್ಮ ಮನೆಗಳನ್ನು ತಕ್ಷಣ ತೆರವುಗೊಳಿಸುವಂತೆ ಇಸ್ರೇಲ್ ಸೇನೆ ಸೂಚಿಸಿದೆ. `ನೀವು ಹಿಜ್ಬುಲ್ಲಾದ ವ್ಯವಸ್ಥೆಗಳು ಹಾಗೂ ಹಿತಾಸಕ್ತಿಗೆ ಸಂಬಂಧಿಸಿದ ಪ್ರದೇಶದ ಬಳಿ ನೆಲೆಸಿದ್ದೀರಿ. ಇವುಗಳ ಮೇಲೆ ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಿರುವುದರಿಂದ ನಿಮ್ಮ ಮನೆಗಳನ್ನು ತೆರವುಗೊಳಿಸಿ ಸ್ಥಳಾಂತರಗೊಳ್ಳಬೇಕು' ಎಂದು ಇಸ್ರೇಲ್ ಸೇನೆ ಸೂಚಿಸಿದ್ದು ಸೂಚನಾ ಪತ್ರದ ಜತೆ ದಾಳಿ ನಡೆಯಲಿರುವ ಪ್ರದೇಶದ ನಕ್ಷೆಯನ್ನೂ ಲಗತ್ತಿಸಿದೆ ಎಂದು ವರದಿ ಹೇಳಿದೆ.
ಈ ಮಧ್ಯೆ, ದಕ್ಷಿಣ ಲೆಬನಾನ್ನಲ್ಲಿ ಹೋರಾಟದ ಸಂದರ್ಭ ತನ್ನ ನಾಲ್ವರು ಯೋಧರು ಸಾವನ್ನಪ್ಪಿದ್ದು ಸೆಪ್ಟಂಬರ್ 30ರಂದು ಲೆಬನಾನ್ನಲ್ಲಿ ಭೂ ದಾಳಿ ಆರಂಭಗೊಂಡಂದಿನಿಂದ ಮೃತಪಟ್ಟ ಯೋಧರ ಸಂಖ್ಯೆ 36ಕ್ಕೇರಿದೆ ಎಂದು ಇಸ್ರೇಲ್ ಮಿಲಿಟರಿ ರವಿವಾರ ಹೇಳಿದೆ.