ಲೆಬನಾನ್: ಹಿಝ್ಬುಲ್ಲಾ ಹೋರಾಟಗಾರರ ನೆಲೆಗಳ ಮೇಲೆ ಇಸ್ರೇಲ್ ದಾಳಿ
PC: x.com/AJEnglish
ಬೈರೂತ್: ಹಿಝ್ಬುಲ್ಲಾ ಹೋರಾಟಗಾರರ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿರುವ ಇಸ್ರೇಲ್, ಇಬ್ಬರು ನಾಯಕರನ್ನು ದಕ್ಷಿಣ ಲೆಬನಾನ್ ನಲ್ಲಿ ಹತ್ಯೆ ಮಾಡಿರುವುದಾಗಿ ಪ್ರಕಟಿಸಿದೆ.
ಹಿಝ್ಬುಲ್ಲಾ ಕ್ಷಿಪಣಿ ಘಟಕದ ಕಮಾಂಡರ್ ಮುಹಮ್ಮದ್ ಇಸ್ಮಾಯಿಲ್ ಮತ್ತು ಉಪಮುಖಂಡ ಹುಸೈನ್ ಅಹ್ಮದ್ ಇಸ್ಮಾಲಿ ಹತ್ಯೆಗೀಡಾಗಿದ್ದಾರೆ ಎಂದು ಇಸ್ರೇಲ್ ಸೇನೆಯ ಪ್ರಕಟಣೆ ಹೇಳಿದೆ.
ಈ ಮಧ್ಯೆ ಇಸ್ರೇಲ್ ದಾಳಿಗೆ ಅಮೆರಿಕ ನೀಡಿರುವ ನೆರವನ್ನು ಇರಾನ್ ಖಂಡಿಸಿದೆ. 5000 ಪೌಂಡ್ ಬಂಕರ್ ಬಸ್ಟರ್ ಗಳನ್ನು ಇಸ್ರೇಲ್ ಗೆ ಅಮೆರಿಕ ಪೂರೈಸಿದೆ ಎಂದು ಆಪಾದಿಸಿದೆ.
"ಐಡಿಎಫ್ ಇಂಟೆಲಿಜೆನ್ಸ್ ಪ್ರಕಾರ, ಐಎಎಫ್ ಪ್ರಸ್ತುತ ಬೈರೂತ್ ಪ್ರದೇಶದಲ್ಲಿ ಆಯಕಟ್ಟಿನ ನೆಲೆಗಳ ಮೇಲೆ ದಾಳಿ ನಡೆಸಿದೆ. ಶಸ್ತ್ರಾಸ್ತ್ರ ತಯಾರಿಕಾ ಸೌಲಭ್ಯಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡುವ ಕಟ್ಟಡ ಮತ್ತು ಪ್ರಮುಖ ಕಮಾಂಡ್ ಸೆಂಟರ್ ಗಳ ಮೇಲೆ ದಾಳಿ ನಡೆದಿದೆ" ಎಂದು ಸ್ಪಷ್ಟಪಡಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಧ್ವನಿಮುದ್ರಿತ ಭಾಷಣದಲ್ಲಿ “ಲೆಬನಾನ್ ನಾಗರಿಕರು ತಮ್ಮ ಸುರಕ್ಷತೆ ದೃಷ್ಟಿಯಿಂದ ಮನೆಗಳನ್ನು ಖಾಲಿ ಮಾಡಬೇಕು” ಎಂದು ಕರೆ ನೀಡಿದ್ದಾರೆ. "ಇದನ್ನು ಗಂಭೀರ ಎಚ್ಚರಿಕೆಯಾಗಿ ಪರಿಗಣಿಸಿ" ಎಂದು ಒತ್ತಿ ಹೇಳಿರುವ ಅವರು, "ಹಾನಿಯ ದಾರಿಯಿಂದ ದಯವಿಟ್ಟು ಹೊರಬನ್ನಿ. ನಮ್ಮ ಕಾರ್ಯಾಚರಣೆ ಮುಗಿದ ಬಳಿಕ ನೀವು ಸುರಕ್ಷಿತವಾಗಿ ನಿಮ್ಮ ಮನೆಗಳಿಗೆ ಮರಳಬಹುದು" ಎಂದು ಹೇಳಿದ್ದಾರೆ.
ಈ ಮಧ್ಯೆ ಅಮೆರಿಕ ಸೇರಿದಂತೆ ಯಾವ ಶಕ್ತಿಯೂ ಗಾಝಾ ಮತ್ತು ಲೆಬನಾನ್ ಮೇಲಿನ ಇಸ್ರೇಲ್ ದಾಳಿಯನ್ನು ತಡೆಯಲು ಶಕ್ತವಾಗಿಲ್ಲ ಎಂದು ಯೂರೋಪಿಯನ್ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಜೋಸೆಫ್ ಬೊರೆಲ್ ಕಳವಳ ವ್ಯಕ್ತಪಡಿಸಿದ್ದಾರೆ.