ಉಗ್ರಗಾಮಿ ಗುಂಪುಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆ ಪ್ರಕ್ರಿಯೆ; ಭದ್ರತಾ ಮಂಡಳಿ ಪಾರದರ್ಶಕವಾಗಿ ವರ್ತಿಸಲಿ: ಭಾರತ

PC : news.un.org
ವಿಶ್ವಸಂಸ್ಥೆ: ವಿಶ್ವಸಂಸ್ಥೆ ಭದ್ರತಾಮಂಡಳಿ ಅಂಗಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಉತ್ತಮ ಪಾರದರ್ಶಕತೆಯ ಅಗತ್ಯವಿರುವುದಾಗಿ ಭಾರತ ಹೇಳಿದೆ. ಭಯೋತ್ಪಾದಕ ಸಂಘಟನೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂಬ ಕೋರಿಕೆಗಳನ್ನು ತಿರಸ್ಕರಿಸುವುದಕ್ಕೆ ಅಥವಾ ವಿಳಂಬಿಸುವುದಕ್ಕೆ ಕಾರಣಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದೆ ಇರುವುದು ಹಾಗೂ ಇದಕ್ಕಕೆ ಸಂಬಂಧಿಸಿದ ಗೌಪ್ಯತೆಯನ್ನು ಆಯ್ದ ವ್ಯಕ್ತಿಗಳ ಗುಂಪುಗಳಿಗೆ ಸೀಮಿತವಾಗಿ ಇರಿಸುವುದು ಸೋಗಿನ ವೀಟೋ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ.ಯಾದ ಪಿ. ಹರೀಶ್ ಅವರು ಗುರುವಾರ ಭದ್ರತಾಮಂಡಳಿಯಲ್ಲಿ ನಡೆದ ಅಂತರ್ ಸರಕಾರಿ ಮಾತುಕತೆಗಳ ಅಧಿವೇಶನದಲ್ಲಿ ಮಾತನಾಡುತ್ತಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಶಾಂತಿಪಾಲನಾ ಒಪ್ಪಂದಗಳ ಅನುಷ್ಠಾನದಲ್ಲಿ ಸುಧಾರಣೆಯನ್ನು ತರುವಂತೆಯೂ ಅವರು ಆಗ್ರಹಿಸಿದರು.
ಭದ್ರತಾ ಮಂಡಳಿಯಲ್ಲಿ ಸುಧಾರಣೆಯಾಗಬೇಕೆಂಬ ಬೇಡಿಕೆಗಳು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಕೇಳಿಬರುತ್ತಿವೆ. ಜಗತ್ತಿನ ವಿವಿಧೆಡೆ ಮಾನವೀಯತೆಗೆ ಮಹತ್ವವನ್ನು ನೀಡುವ ಅದರಲ್ಲೂ ವಿಶೇಷವಾಗಿ ಶಾಂತಿ ಹಾಗೂ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಮಧ್ಯಪ್ರವೇಶಿಸುವ ವಿಶ್ವಸಂಸ್ಥೆಯ ಸಾಮರ್ಥ್ಯದ ಬಗ್ಗೆ ಜಗತ್ತು ಆತಂಕಗಳನ್ನು ವ್ಯಕ್ತಪಡಿಸುತ್ತಿರುವಾಗ ಈ ಕರೆಯುವ ಹೆಚ್ಚಿನ ಮಹತ್ವವನ್ನು ಪಡೆಯುತ್ತಿದೆ ಎಂದರು.
ಭಯೋತ್ಪಾದಕ ಗುಂಪುಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸುವ ವಿಷಯದಲ್ಲಿ ಭದ್ರತಾ ಮಂಡಳಿ ಪಾರದರ್ಶಕವಾಗಿ ವರ್ತಿಸುತ್ತಿಲ್ಲವೆಂದು ಅಸಮಾಧಾನ ಅವರು ಅಸಮಾಧಾನ ವ್ಯಕ್ತಪಡಿಸಿದರು. ಉಗ್ರಗಾಮಿ ಸಂಘಟನೆಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಎಳಿಸುವ ಕೋರಿಕೆಯನ್ನು ತಿರಸ್ಕರಿಸುವಾಗ ಅಥವಾ ತಾಂತ್ರಿಕ ಕಾರಣಗಳಿಗಾಗಿ ಸ್ಥಗಿತಗೊಳಿಸುವ ಕೆಲವೇ ಕೆಲವು ವ್ಯಕ್ತಿಗಳ ವಿಶೇಷ ಅಧಿಕಾರವಾಗಿ ಬಿಟ್ಟಿದೆ . ಇದು ನಿಜಕ್ಕೂ ‘ಸೋಗಿನ ವೀಟೋ’ ಆಗಿದೆ ಎಂದರು.
‘1267 ಅಲ್ ಖಾಯ್ದಾ ನಿರ್ಬಂಧ’ಗಳ ಸಮಿತಿಯಂತಹ ಭದ್ರತಾ ಮಂಡಳಿಯ ಅಂಗಸಂಸ್ಥೆಗಳ ಕಾರ್ಯನಿರ್ವಹಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಹರೀಶ್ ಅವರು, ವಿಶೇಷವಾಗಿ ಪಾಕ್ ಮೂಲದ ಉಗ್ರಗಾಮಿ ಗುಂಪುಗಳನ್ನು ಹಾಗೂ ವ್ಯಕ್ತಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯನ್ನು ಅವು ನಿಭಾಯಿಸಿದ ರೀತಿಯ ಬಗ್ಗೆ ಭಾರತವು ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಾ ಬಂದಿದೆ ಎಂದು ತಿಳಿಸಿದರು.
ದೀರ್ಘಕಾಲದಿಂದ ನೆನೆಗುದಿಯಲ್ಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಬಗ್ಗೆ ಕಾರ್ಯಪ್ರವೃತ್ತವಾಗುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕರೆ ನೀಡಿದರು. ಚಿಂತನೆಗಳು ಹಾಗೂ ಚರ್ಚೆಗಳ ವಿನಿಮಯದಲ್ಲಷ್ಟೇ ಸದಸ್ಯ ದೇಶಗಳು ಸಮಯ ವ್ಯರ್ಥ ಮಾಡಬಾರದು. ಇದು ಮುನ್ನಡಿಯಿಡುವ ಮತ್ತು ಫಲಿತಾಂಶವನ್ನು ತೋರಿಸುವ ಸಮಯವಾಗಿದೆ ಎಂದರು.