ಲಿಬಿಯಾ | ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಭೂಕುಸಿತ ; 8 ಮಂದಿ ಮೃತ್ಯು
PHOTO : thehansindia ( ಸಾಂದರ್ಭಿಕ ಚಿತ್ರ)
ಕಂಪಾಲ : ಉಗಾಂಡಾ ರಾಜಧಾನಿ ಕಂಪಾಲದಲ್ಲಿ ತ್ಯಾಜ್ಯದ ಗುಡ್ಡವೊಂದು ಕುಸಿದುಬಿದ್ದು ಇಬ್ಬರು ಮಕ್ಕಳ ಸಹಿತ ಕನಿಷ್ಠ 8 ಮಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಂಪಾಲದ ಉತ್ತರದ ನೆರೆಹೊರೆಯ ಕಿಟೀಜಿ ನಗರದಲ್ಲಿರುವ ತ್ಯಾಜ್ಯ ಸಂಗ್ರಹಣಾ ಪ್ರದೇಶದಲ್ಲಿ ರಾಶಿಬಿದ್ದಿದ್ದ ತ್ಯಾಜ್ಯದ ಗುಡ್ಡ ಭಾರೀ ಮಳೆಯ ಕಾರಣ ಕುಸಿದು ಸಮೀಪದಲ್ಲಿರುವ ಹಲವು ಮನೆಗಳು, ಜನರು ಹಾಗೂ ಜಾನುವಾರುಗಳು ತ್ಯಾಜ್ಯಮಿಶ್ರಿತ ನೆರೆನೀರಿನಲ್ಲಿ ಮುಳುಗಿವೆ. ಇಬ್ಬರು ಮಕ್ಕಳ ಸಹಿತ 8 ಮಂದಿಯ ಮೃತದೇಹವನ್ನು ಇದುವರೆಗೆ ಪತ್ತೆಹಚ್ಚಲಾಗಿದ್ದು 14 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಸಾವು-ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಕಂಪಾಲ ರಾಜಧಾನಿ ನಗರ ಪ್ರಾಧಿಕಾರ(ಕೆಸಿಸಿಎ)ದ ಅಧಿಕಾರಿಗಳು ಹೇಳಿದ್ದಾರೆ.
ತ್ಯಾಜ್ಯ ವಿಲೇವಾರಿ ಘಟಕದ ಸ್ಥಳದಲ್ಲಿನ ಪರಿಸ್ಥಿತಿಯನ್ನು `ರಾಷ್ಟ್ರೀಯ ದುರಂತ' ಎಂದು ಪ್ರಾಧಿಕಾರದ ಮುಖ್ಯಸ್ಥರು ಕೆಲ ತಿಂಗಳ ಹಿಂದೆ ವ್ಯಾಖ್ಯಾನಿಸಿದ್ದು ಸುತ್ತಮುತ್ತಲಿನ ನಿವಾಸಿಗಳು ಹಲವಾರು ಅನಾರೋಗ್ಯಗಳಿಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದರು.
ಶನಿವಾರ ಬೆಳಿಗ್ಗೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ರಚನಾತ್ಮಕ ವೈಫಲ್ಯದ ಕಾರಣ ಒಂದು ಪಾರ್ಶ್ವ ಕುಸಿದಿದೆ. ಹಾನಿಯ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ. ಪ್ರದೇಶದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚಿನ ಅನಾಹುತವನ್ನು ತಡೆಯಲು ನಮ್ಮ ತಂಡವು ಇತರ ಸರಕಾರಿ ಏಜೆನ್ಸಿಗಳ ಜತೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೆಸಿಸಿಎ ಅಧಿಕಾರಿಗಳು ಹೇಳಿದ್ದಾರೆ.