ಗಾಝಾದಲ್ಲಿ ನೆರವು ಪೂರೈಕೆ ತಡೆ ತೆರವುಗೊಳಿಸಿ ; ಇಸ್ರೇಲ್ಗೆ ಹೌದಿಗಳ 4 ದಿನಗಳ ಗಡುವು

PC : aljazeera.com
ಸನಾ: ಗಾಝಾಕ್ಕೆ ನೆರವು ಪೂರೈಕೆಗೆ ವಿಧಿಸಿರುವ ನಿರ್ಬಂಧವನ್ನು 4 ದಿನಗಳ ಒಳಗೆ ತೆರವುಗೊಳಿಸದಿದ್ದರೆ ಇಸ್ರೇಲ್ ವಿರುದ್ಧದ ತನ್ನ ನೌಕಾ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸುವುದಾಗಿ ಯೆಮನ್ ನ ಹೌದಿ ಸಶಸ್ತ್ರ ಹೋರಾಟಗಾರರ ಗುಂಪಿನ ನಾಯಕ ಅಬ್ದುಲ್ ಮಲಿಕ್ ಅಲ್-ಹೌದಿ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಗಾಝಾದಲ್ಲಿ ಹಮಾಸ್ ಜತೆ ಇಸ್ರೇಲ್ ನಡೆಸುತ್ತಿರುವ ಯುದ್ಧದಲ್ಲಿ ಫೆಲೆಸ್ತೀನೀಯರನ್ನು ಬೆಂಬಲಿಸಿ 2023ರ ನವೆಂಬರ್ನಿಂದ ಕೆಂಪು ಸಮುದ್ರ ವ್ಯಾಪ್ತಿಯಲ್ಲಿ ನೌಕೆಗಳ ಮೇಲೆ 100ಕ್ಕೂ ಅಧಿಕ ದಾಳಿಗಳನ್ನು ಇರಾನ್ ಬೆಂಬಲಿತ ಹೌದಿಗಳು ನಡೆಸಿದ್ದರು. ಈ ಅವಧಿಯಲ್ಲಿ 2 ಹಡಗುಗಳನ್ನು ಹೌದಿಗಳು ಮುಳುಗಿಸಿದ್ದರು, ಮತ್ತೊಂದು ಹಡಗನ್ನು ವಶಪಡಿಸಿಕೊಂಡಿದ್ದರು ಹಾಗೂ ಕನಿಷ್ಠ 4 ನಾವಿಕರನ್ನು ಹತ್ಯೆ ಮಾಡಿದ್ದರು. ಇದು ಜಾಗತಿಕ ಶಿಪ್ಪಿಂಗ್(ಹಡಗಿನ ಮೂಲಕ ಸರಕು ರವಾನೆ) ವ್ಯವಸ್ಥೆಯ ಮೇಲ್ ತೀವ್ರ ಪರಿಣಾಮ ಬೀರಿತ್ತು. ಜನವರಿಯಲ್ಲಿ ಗಾಝಾದಲ್ಲಿ ಕದನ ವಿರಾಮ ಒಪ್ಪಂದ ಏರ್ಪಟ್ಟ ಬಳಿಕ ನೌಕೆಗಳ ಮೇಲಿನ ಹೌದಿಗಳ ದಾಳಿ ಸ್ಥಗಿತಗೊಂಡಿದೆ.
ನಾವು 4 ದಿನಗಳ ಗಡುವು ವಿಧಿಸುತ್ತೇವೆ. ಆ ಬಳಿಕವೂ ಇಸ್ರೇಲಿ ಶತ್ರುಗಳು ಗಾಝಾಕ್ಕೆ ಮಾನವೀಯ ನೆರವು ಪೂರೈಕೆಗೆ ಅಡ್ಡಿ ಮುಂದುವರಿಸಿದರೆ, ಇಸ್ರೇಲಿ ಶತ್ರುಗಳ ವಿರುದ್ಧದ ನಮ್ಮ ನೌಕಾ ಕಾರ್ಯಾಚರಣೆಯನ್ನು ಪುನರಾರಂಭಿಸುತ್ತೇವೆ ಎಂದು ಅಲ್-ಹೌದಿ ಹೇಳಿದ್ದಾರೆ. ಗಾಝಾದಿಂದ ಫೆಲೆಸ್ತೀನೀಯರನ್ನು ಬಲವಂತವಾಗಿ ಸ್ಥಳಾಂತರಿಸಲು ಅಮೆರಿಕ ಮತ್ತು ಇಸ್ರೇಲ್ ಪ್ರಯತ್ನಿಸಿದರೆ ಮಿಲಿಟರಿ ಕಾರ್ಯಾಚರಣೆ ನಡೆಸುವುದಾಗಿಯೂ ಹೌದಿಗಳು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಗಾಝಾಕ್ಕೆ ನೆರವು ಪೂರೈಸುವ ಟ್ರಕ್ಗಳ ಪ್ರವೇಶಕ್ಕೆ ಮಾರ್ಚ್ 2ರಂದು ಇಸ್ರೇಲ್ ತಡೆಯೊಡ್ಡಿದೆ.