ಭಾರತ-ಯುಎಇ ಸ್ನೇಹ ಚಿರಾಯುವಾಗಲಿ: ಮೋದಿ
ನರೇಂದ್ರ ಮೋದಿ | Photo: PTI
ಅಬುದಾಭಿ : ಮಂಗಳವಾರ ರಾತ್ರಿ ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಅಹ್ಲಾನ್ ಮೋದಿ ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತ-ಯುಎಇ ಸ್ನೇಹಸಂಬಂಧ ಚಿರಾಯುವಾಗಲಿ ಎಂದು ಹಾರೈಸಿದರು.
ಭಾರತೀಯ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಸಭೆಯನ್ನುದ್ದೇಶಿಸಿ ಕನ್ನಡ, ತೆಲುಗು, ಮಲಯಾಳಂನಲ್ಲಿ ಮೋದಿ ಮಾತನಾಡಿದರು. ಬಳಿಕ ನಡೆದ `ಜಾಗತಿಕ ಸರಕಾರಗಳ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಜಗತ್ತಿಗೆ, ಭ್ರಷ್ಟಾಚಾರ ಮುಕ್ತ, ಎಲ್ಲರನ್ನೂ ಜತೆಗೆ ಕರೆದೊಯ್ಯುವ ಪಾರದರ್ಶಕ ಸರಕಾರಗಳ ಅಗತ್ಯವಿದೆ ಎಂದರು.
ತಂತ್ರಜ್ಞಾನವನ್ನು ದೊಡ್ಡ ಬದಲಾವಣೆಯ ಮಾರ್ಗವನ್ನಾಗಿಸುವ ಸರಕಾರಗಳು ಇಂದು ಅಗತ್ಯವಾಗಿದೆ. ಪರಿಸರಕ್ಕೆ ಸಂಬಂಧಿಸಿದ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸುವ ಸರಕಾರಗಳು ಇಂದು ಜಗತ್ತಿಗೆ ಅಗತ್ಯವಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಕಳವಳವನ್ನು ಪರಿಹರಿಸುವ, ಜಾಗತಿಕ ದಕ್ಷಿಣ ಎಂಬ ಪರಿಕಲ್ಪನೆಯನ್ನು ಮುಂದುವರಿಸಲು, ಸೈಬರ್ ಅಪರಾಧ ಮತ್ತು ಭಯೋತ್ಪಾದನೆಯಂತಹ ಜಾಗತಿಕ ಸವಾಲುಗಳನ್ನು ನಿಭಾಯಿಸಲು ರಾಷ್ಟ್ರಗಳ ನಡುವೆ ಒಗ್ಗಟ್ಟಿನ ಸಹಯೋಗದ ಅಗತ್ಯವಿದೆ ಎಂದು ಮೋದಿ ಹೇಳಿದರು.
`ಜಾಗತಿಕ ಸರಕಾರವು ' ಎಲ್ಲಾ ಭೂಮಿ ಮತ್ತು ಮಾನವೀಯತೆಯ ವ್ಯಾಪ್ತಿಯನ್ನು ಹೊಂದಿರುವ ಒಂದೇ ರಾಜಕೀಯ ಅಧಿಕಾರದ ಪರಿಕಲ್ಪನೆಯಾಗಿದೆ. ಯುಎಇ ಸ್ಥಾಪಿಸಿದ `ಜಾಗತಿಕ ಸರಕಾರಗಳ ಶೃಂಗಸಭೆ' ಅಂತರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವ ಮತ್ತು ಮಾನವೀಯತೆಯ ಸುಧಾರಣೆಗಾಗಿ ಸರಕಾರಗಳ ಪಥಗಳನ್ನು ರೂಪಿಸುವ ಗುರಿಯನ್ನು ಹೊಂದಿರುವ ಪ್ರಮುಖ ಜಾಗತಿಕ ಸಂಘಟನೆಯಾಗಿದೆ.