ಲಾಸ್ ಏಂಜಲೀಸ್: ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚಿಗೆ ಐವರ ಸಜೀವ ದಹನ
PC : PTI\AP
ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದ ಆಕರ್ಷಕ ನಗರ ಮತ್ತು ಚಲನಚಿತ್ರ ಹಾಗೂ ಟೆಲಿವಿಷನ್ ಉದ್ಯಮ ಅಥವಾ ಹಾಲಿವುಡ್ ತಾಣ ಲಾಸ್ಎಂಜಲೀಸ್, ಭೀಕರ ಕಾಳ್ಗಿಚ್ಚಿನಿಂದ ತತ್ತರಿಸಿದ್ದು, ಕನಿಷ್ಠ ಐದು ಮಂದಿ ಮೃತಪಟ್ಟಿದ್ದಾರೆ. ಹಲವು ಕಟ್ಟಡಗಳು ಭಸ್ಮವಾಗಿದ್ದು, ಸಾವಿರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಬೆಂಕಿ ಜ್ವಾಲೆಯ ಭೀತಿ ಎದುರಿಸುತ್ತಿರುವ ಅಸಂಖ್ಯಾತ ಐಷಾರಾಮಿ ಮನೆಗಳು ಉಳಿದುಕೊಳ್ಳುತ್ತವೆಯೇ ಇಲ್ಲವೇ ಎಂಬ ಆತಂಕ ಮನೆಮಾಡಿದೆ.
ಮಂಗಳವಾರ ಕಾಳ್ಗಿಚ್ಚು ಸ್ಯಾಂಟಾ ಮೋನಿಯಾ ಪರ್ವತ ಪ್ರದೇಶದಲ್ಲಿ ಕೋಟ್ಯಧೀಶರರ ಮನೆಗಳನ್ನು ಹೊಂದಿರುವ ಗಗನಚುಂಬಿ ಫೆಸಿಫಿಕ್ ಪಲಿಸಡೇಸ್ ಎನ್ಕ್ಲೇವ್ ಕಟ್ಟಡಕ್ಕೆ ವ್ಯಾಪಿಸಿದೆ. ಬಳಿಕ ಅಲ್ತಾಂಡೇನಾದ ಈಟನ್ ಕೆನ್ಯೊನ್ಗೆ ಬೆಂಕಿ ವ್ಯಾಪಿಸಿದ್ದು, ನಿಯಂತ್ರಣಕ್ಕೆ ಬಾರದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಶಳ ಸಿಬ್ಬಂದಿ ಸಮರೋಪಾದಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಐದು ಮಂದಿ ಬೆಂಕಿಗೆ ಬಲಿಯಾಗಿದ್ದಾರೆ.
ಮಂಗಳವಾರ ಲಾಸ್ಎಂಜಲೀಸ್ನಲ್ಲಿ ಎರಡು ಬೃಹತ್ ಕಾಳ್ಗಿಚ್ಚು ಹರಡಿದ್ದು, ವ್ಯಾಪಕ ಹಾನಿ ಮತ್ತು ಅರಾಜಕತೆಯನ್ನು ಸೃಷ್ಟಿಸಿದೆ. ಉಭಯ ವಸತಿ ಸಮುಚ್ಚಯಗಳಿಗೆ ಬೆಂಕಿ ವ್ಯಾಪಿಸಿದ ಕಾರಣ ಸಾವಿರಾರು ಮಂದಿ ಆತಂಕಕಕ್ಕೆ ಸಿಲುಕಿದ್ದಾರೆ ಹಾಗೂ ಸುರಕ್ಷಿತ ಪ್ರದೇಶಗಳಿಗೆ ಅವರನ್ನು ಸ್ಥಳಾಂತರಿಸಲಾಗಿದೆ.
ಬೆಳಿಗ್ಗೆ 10.30ರ ಸುಮಾರಿಗೆ ಆರಂಭವಾದ ಬೆಂಕಿ 4.6 ಮೈಲು ವ್ಯಾಪ್ತಿಯ ಪ್ರದೇಶವನ್ನು ಆಹುತಿ ಪಡೆದಿದೆ. ಆಗಸದಲ್ಲಿ ದಟ್ಟ ಹೊಗೆ ಕಂಡುಬರುತ್ತಿದ್ದು, ಹತ್ತು ಕಿಲೋಮೀಟರ್ ದೂರಕ್ಕೂ ಬೆಂಕಿಯ ಜ್ವಾಲೆ ಕಾಣಿಸುತ್ತಿದೆ ಎಂದು ವೆನಿಸ್ಬೀಚ್ ಪ್ರದೇಶದ ನಿವಾಸಿಗಳು ಹೇಳಿದ್ದಾರೆ.
ಬುಧವಾರದ ವೇಳೆಗೆ ಬೆಂಕಿ 108 ಚದರ ಕಿಲೋಮೀಟರ್ ಅಂದರೆ ಇಡೀ ಸ್ಯಾನ್ಫ್ರಾನ್ಸಿಸ್ಕೊ ನಗರದಷ್ಟು ಗಾತ್ರದ ಪ್ರದೇಶಕ್ಕೆ ವ್ಯಾಪಿಸಿದೆ. ಸಾವಿರಾರು ಮಂದಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಪ್ರಯತ್ನ ಮಾಡುತ್ತಿದ್ದು, ರಭಸದ ಗಾಳಿಯಿಂದಾಗಿ ವಿಮಾನಗಳ ಮೂಲಕ ನೀರು ಸುರಿಸಲು ಕೂಡಾ ಸಾಧ್ಯವಾಗುತ್ತಿಲ್ಲ ಎಂದು ಲಾಸ್ಎಂಜಲೀಸ್ ಕೌಂಟಿ ಶೆರಿಫ್ ಇಲಾಖೆ ಹೇಳಿದೆ.