ಮಡಗಾಸ್ಕರ್: ದೋಣಿ ಮುಳುಗಿ ಕನಿಷ್ಟ 22 ವಲಸಿಗರು ಮೃತ್ಯು
ಸಾಂದರ್ಭಿಕ ಚಿತ್ರ | PC : NDTV
ಅಂಟಾನಾನರಿವೊ: ಮಡಗಾಸ್ಕರ್ ಕರಾವಳಿ ಬಳಿ ರವಿವಾರ ವಲಸಿಗರ ಎರಡು ದೋಣಿಗಳು ಮುಳುಗಿ ಕನಿಷ್ಟ 22 ವಲಸಿಗರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಸೊಮಾಲಿಯಾದಿಂದ ಹಿಂದು ಮಹಾಸಾಗರದ ಮಯೊಟ್ಟೆ ಪ್ರದೇಶಕ್ಕೆ ತೆರಳುತ್ತಿದ್ದ ದೋಣಿಗಳು ಮುಳುಗಿದ್ದು ಕನಿಷ್ಟ 22 ಸೊಮಾಲಿಯಾ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ಸೊಮಾಲಿಯಾದ ಮಾಹಿತಿ ಸಚಿವ ದೌದ್ ಅವೀಸ್ ಹೇಳಿದ್ದಾರೆ. ಮಡಗಾಸ್ಕರ್ ಕರಾವಳಿಯ ನೋಸಿ ಇರಾಂಜ ನಗರದ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದವರು ಮುಳುಗುತ್ತಿದ್ದ ದೋಣಿಯನ್ನು ಪತ್ತೆಹಚ್ಚಿದ್ದು 15 ಮಹಿಳೆಯರ ಸಹಿತ 25 ವಲಸಿಗರನ್ನು ರಕ್ಷಿಸಿದ್ದಾರೆ. ಆದರೆ 7 ವಲಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಡಗಾಸ್ಕರ್ ನ ಕರಾವಳಿಯಲ್ಲಿ ಮುಳುಗಿದ್ದ ಮತ್ತೊಂದು ದೋಣಿಯನ್ನು ಕರಾವಳಿ ಕಾವಲು ಪಡೆ ಪತ್ತೆಹಚ್ಚಿದ್ದು 23 ವಲಸಿಗರನ್ನು ರಕ್ಷಿಸಲಾಗಿದೆ. ಆದರೆ 15 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಬಂದರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡು ದೋಣಿಗಳಲ್ಲಿ ಒಟ್ಟು 70 ಸೊಮಾಲಿಯಾ ಪ್ರಜೆಗಳಿದ್ದರು. ಅವರಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೊಮಾಲಿಯಾ ಸರಕಾರದ ಮೂಲಗಳು ದೃಢಪಡಿಸಿವೆ.