ವೆನೆಝುವೆಲಾ ಅಧ್ಯಕ್ಷೀಯ ಚುನಾವಣೆ: ನಿಕೊಲಸ್ ಮಡುರೊ ಗೆಲುವು ಘೋಷಣೆ
ವಿಪಕ್ಷಗಳ ತಿರಸ್ಕಾರ
britannica.com ನಿಕೊಲಸ್ ಮಡುರೊ
ವೆನೆಝುವೆಲಾ: ವೆನೆಝುವೆಲಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಕೊಲಸ್ ಮಡುರೊ ಗೆಲುವು ಸಾಧಿಸಿರುವುದಾಗಿ ರವಿವಾರ ಘೋಷಿಸಲಾಗಿದೆ. ಆದರೆ ಈ ಫಲಿತಾಂಶವನ್ನು ತಿರಸ್ಕರಿಸುವುದಾಗಿ ದೇಶದ ಪ್ರಮುಖ ವಿಪಕ್ಷ ಹೇಳಿದೆ.
ನಿಕೊಲಸ್ ಮಡುರೊ 51.2%ದಷ್ಟು ಮತಗಳನ್ನು ಪಡೆದು ಮರು ಆಯ್ಕೆಗೊಂಡಿರುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಪ್ರಮುಖ ವಿಪಕ್ಷಗಳ ಅಭ್ಯರ್ಥಿ ಎಡ್ಮಂಡೊ ಗೊನ್ಸಾಲ್ವಿಸ್ ಉರೂಷಿಯಾ 44.2% ಮತಗಳನ್ನು ಪಡೆದಿದ್ದಾರೆ ಎಂದು ಆಯೋಗ ಹೇಳಿದೆ. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ನಿಕೊಲಸ್ ಮಡುರೊ ಗೆಲ್ಲುವ ಸಾಧ್ಯತೆ ಕಡಿಮೆ ಮತ್ತು ಎಡ್ಮಂಡೊ ಗೊನ್ಸಾಲ್ವಿಸ್ ಗೆಲುವು ಬಹುತೇಕ ನಿಶ್ಚಿತ ಎಂದು ಭವಿಷ್ಯ ನುಡಿದಿದ್ದವು.
ಮತ ಎಣಿಕೆಯಲ್ಲಿ ತನ್ನ ಅಭ್ಯರ್ಥಿ ಗೊನ್ಸಾಲ್ವಿಸ್ 70% ಮತ ಪಡೆದಿದ್ದಾರೆ. ಆದರೆ ಮಡುರೊಗೆ ನಿಷ್ಟರಾಗಿರುವ ಚುನಾವಣಾ ಆಯೋಗ ಫಲಿತಾಂಶವನ್ನು ತಿರುಚಿದೆ. ಗೆಲುವು ನಮ್ಮದೇ ಎಂದು ವಿಪಕ್ಷಗಳ ಮೈತ್ರಿಕೂಟ ಪ್ರತಿಪಾದಿಸಿದೆ. ವೆನೆಝುವೆಲಾ ಮತ್ತೊಮ್ಮೆ ರಾಜಕೀಯ ಬಿಕ್ಕಟ್ಟಿನತ್ತ ಸಾಗುತ್ತಿರುವ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ.