ಮರಾಠ ಮೀಸಲಾತಿಗೆ ಬೇಡಿಕೆ ಇಟ್ಟು ರಾಜೀನಾಮೆ ನೀಡಿದ ಬಿಜೆಪಿ ಶಾಸಕ
Photo : twitter
ಮುಂಬೈ: ಮರಾಠ ಮೀಸಲಾತಿ ಬೇಡಿಕೆಯನ್ನು ಬೆಂಬಲಿಸಿ ಶಿವಸೇನೆ ಸಂಸದರಿಬ್ಬರು ರಾಜಿನಾಮೆ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ.
ಗೆವ್ರಾಯಿ ವಿಧಾನಸಭಾ ಕ್ಷೇತ್ರದ ಶಾಸಕ ಲಕ್ಷ್ಮಣ ಪವಾರ್ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಮರಾಠ ಕೋಟಾ ಸಮಸ್ಯೆ ಹಲವು ವರ್ಷಗಳಿಂದ ಬಾಕಿ ಇದೆ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದಿದ್ದಾರೆ.
"ಮರಾಠ ಕೋಟಾ ಸಮಸ್ಯೆ ಹಲವು ವರ್ಷಗಳಿಂದ ಬಾಕಿ ಉಳಿದಿದೆ. ಮರಾಠ ಸಮುದಾಯದ ಬೇಡಿಕೆಗೆ ನಾನು ನನ್ನ ಬೆಂಬಲವನ್ನು ನೀಡುತ್ತೇನೆ. ಮರಾಠ ಮೀಸಲಾತಿಗೆ ಬೆಂಬಲಿಸಲು ನಾನು ನನ್ನ ರಾಜೀನಾಮೆಯನ್ನು ನೀಡುತ್ತಿದ್ದೇನೆ" ಎಂದು ಪವಾರ್ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಬಿಜೆಪಿಯು ರಾಜ್ಯದಲಿ ಶಿವಸೇನೆ ನೇತೃತ್ವದ ಆಡಳಿತ ಒಕ್ಕೂಟದ ಭಾಗವಾಗಿದೆ.
ಮಹಾರಾಷ್ಟ್ರದ ನಾಸಿಕ್ ಮತ್ತು ಹಿಂಗೋಲಿಯ ಶಿವಸೇನೆ ಸಂಸದರು, ಮರಾಠ ಮೀಸಲಾತಿ ಬೇಡಿಕೆಯನ್ನು ಬೆಂಬಲಿಸಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಲಕ್ಷ್ಮಣ್ ಪವಾರ್ ಅವರ ಈ ನಿರ್ಧಾರವು ಬಂದಿದೆ.
ಮರಾಠಾ ಸಮುದಾಯದ ಸದಸ್ಯ, ಕಾರ್ಯಕರ್ತ ಮನೋಜ್ ಜಾರಂಗೆ ನೇತೃತ್ವದಲ್ಲಿ ಮರಾಠ ಕೋಟಾಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭವಾಗಿದ್ದು, ಏಳನೇ ದಿನದತ್ತ ಕಾಲಿಟ್ಟಿದೆ.
ಜಾರಂಗೆ ಅವರು ಅಕ್ಟೋಬರ್ 25 ರಿಂದ ಜಲ್ನಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಸೋಮವಾರ, ಬೀಡ್ ಜಿಲ್ಲೆಯಲ್ಲಿ ಮರಾಠ ಕೋಟಾ ಆಂದೋಲನವು ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ತಿರುಗಿತ್ತು.