ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಗೆ ಪುತ್ರನ ಕಣಕ್ಕಿಳಿಸಿದ ರಾಜಪಕ್ಸ
(@RajapaksaNamal/X)
ಕೊಲಂಬೊ : ಶ್ರೀಲಂಕಾದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಎಸ್ಎಲ್ಪಿಪಿ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಅವರ ಪುತ್ರ ನಮಾಲ್ ರಾಜಪಕ್ಸ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದರೊಂದಿಗೆ ಹಾಲಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆಗೆ ರಾಜಪಕ್ಸ ಕುಟುಂಬದ ಬೆಂಬಲ ಅಧಿಕೃತವಾಗಿ ಕೊನೆಗೊಂಡಂತಾಗಿದೆ.
ಸೆಪ್ಟಂಬರ್ 21ಕ್ಕೆ ನಿಗದಿಯಾಗಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ 38 ವರ್ಷದ ನಮಾಲ್ ರಾಜಪಕ್ಸ `ಶ್ರೀಲಂಕಾ ಪೀಪಲ್ಸ್ ಫ್ರಂಟ್(ಎಸ್ಎಲ್ಪಿಪಿ) ಪಕ್ಷದ ಅಭ್ಯರ್ಥಿಯಾಗಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸಾಗರ ಕರಿಯಾವಾಸಮ್ ಬುಧವಾರ ಘೋಷಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಾಜಪಕ್ಸ ಕುಟುಂಬದ ಮೂರನೇ ಸದಸ್ಯನಾಗಿದ್ದಾರೆ ನಮಾಲ್. ಈ ಹಿಂದೆ ಅವರ ತಂದೆ ಮಹಿಂದಾ ರಾಜಪಕ್ಸ, ಚಿಕ್ಕಪ್ಪ ಗೊತಬಯ ರಾಜಪಕ್ಸ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ನಮಾಲ್ ಚುನಾವಣಾ ಕಣಕ್ಕೆ ಇಳಿಯುವುದರೊಂದಿಗೆ ಈ ಬಾರಿಯ ಅಧ್ಯಕ್ಷೀಯ ಚುನಾವಣೆ ಚತುಷ್ಕೋನ ಸ್ಪರ್ಧೆಯಾಗಿ ರೂಪುಗೊಂಡಿದೆ. ನಮಲ್, ಹಾಲಿ ಅಧ್ಯಕ್ಷ ವಿಕ್ರಮಸಿಂಘೆ,, ವಿಪಕ್ಷ ಮುಖಂಡ ಸಜಿತ್ ಪ್ರೇಮದಾಸ ಮತ್ತು ಜೆವಿಪಿ ಮುಖಂಡ ಅರುಣ ಕುಮಾರ ದಿಸ್ಸನಾಯಕ ಚುನಾವಣಾ ಕಣದಲ್ಲಿದ್ದಾರೆ.