ಡಿಸೆಂಬರ್ 1ರಿಂದ ಭಾರತೀಯರಿಗೆ ಮಲೇಶ್ಯಾಗೆ ವೀಸಾ ಮುಕ್ತ ಪ್ರವೇಶ
ಸಾಂದರ್ಭಿಕ ಚಿತ್ರ (PTI)
ಕೌಲಾಲಂಪುರ್: ಡಿಸೆಂಬರ್ 1 ರಿಂದ ಪ್ರಾರಂಭಗೊಂಡು ಭಾರತ ಮತ್ತು ಚೀನಾದ ನಾಗರಿಕರಿಗೆ ಮಲೇಶ್ಯಾದಲ್ಲಿ 30 ದಿನಗಳ ಕಾಲ ಉಳಿದುಕೊಳ್ಳಲು ವೀಸಾ-ಮುಕ್ತ ಪ್ರವೇಶವನ್ನು ನೀಡುವುದಾಗಿ ಅಲ್ಲಿನ ಪ್ರಧಾನಿ ಅನ್ವರ್ ಇಬ್ರಾಹಿಂ ಹೇಳಿದ್ದಾರೆ.
ತಮ್ಮ ಪೀಪಲ್ಸ್ ಜಸ್ಟಿಸ್ ಪಾರ್ಟಿ ಸಭೆಯಲ್ಲಿ ರವಿವಾರ ಮಾತನಾಡುವ ವೇಳೆ ಅನ್ವರ್ ಮೇಲಿನ ಘೋಷಣೆ ಮಾಡಿದ್ದಾರೆ, ಈ ವೀಸಾ ವಿನಾಯಿತಿ ಎಷ್ಟು ಸಮಯ ಅನ್ವಯವಾಗಲಿದೆ ಎಂಬ ಕುರಿತು ಅವರು ಮಾಹಿತಿ ನೀಡಿಲ್ಲ.
ಭಾರತ ಮತ್ತು ಚೀನಾ ದೇಶಗಳು ಮಲೇಶ್ಯಾದ ಪಾಲಿಗೆ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಅತಿದೊಡ್ಡ ಮೂಲ ಉತ್ಪನ್ನ ಮಾರುಕಟ್ಟೆಗಳಾಗಿವೆ.
ಈ ವರ್ಷದ ಜನವರಿಯಿಂದ ಜೂನ್ ತನಕ ಮಲೇಷ್ಯಾಗೆ ಆಗಮಿಸಿದ ಪ್ರವಾಸಿಗರ ಸಂಖ್ಯೆ 91.6 ಲಕ್ಷ ಆಗಿದೆ. ಈ ಪ್ರವಾಸಿಗರ ಪೈಕಿ ಚೀನಾದ ಪ್ರವಾಸಿಗರ ಸಂಖ್ಯೆ 4,98,540 ಆಗಿದ್ದರೆ ಭಾರತದ ಪ್ರವಾಸಿಗರ ಸಂಖ್ಯೆ 2,83,885 ಆಗಿದೆ. ಕೋವಿಡ್ ಪೂರ್ವ 2019ರಲ್ಲಿ ಮಲೇಶ್ಯಾಗೆ ಆಗಮಿಸಿದ ಭಾರತದ ಪ್ರವಾಸಿಗರ ಸಂಖ್ಯೆ 15 ಲಕ್ಷ ಆಗಿದ್ದರೆ ಚೀನಾ ಪ್ರವಾಸಿಗರ ಸಂಖ್ಯೆ 3,54,486 ಆಗಿದೆ.
ಥೈಲ್ಯಾಂಡ್ ಕೂಡ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ವೀಸಾ ಮುಕ್ತ ಪ್ರವೇಶ ಅನುಮತಿಸಿದ ಬೆನ್ನಲ್ಲೇ ಮಲೇಷ್ಯಾದ ನಿರ್ಧಾರ ಪ್ರಕಟಗೊಂಡಿದೆ.