ಮಾಲ್ದೀವ್ಸ್: ಭಾರತೀಯ ಪ್ರವಾಸಿಗರ ಸಂಖ್ಯೆ ಶೇ.33 ರಷ್ಟು ಕುಸಿತ
Photo: PTI
ಮಾಲೆ, ಮಾ.8: ಭಾರತ-ಮಾಲ್ದೀವ್ಸ್ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಡುತ್ತಿರುವಂತೆಯೇ ಮಾಲ್ದೀವ್ಸ್ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಮಾಲ್ದೀವ್ಸ್ಗೆ ಭೇಟಿ ನೀಡಿದ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.33 ಕುಸಿತವಾಗಿದೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ 2023ರ ಮಾರ್ಚ್ 4ರವರೆಗೆ 41,054 ಭಾರತೀಯ ಪ್ರವಾಸಿಗರು ಮಾಲ್ದೀವ್ಸ್ಗೆ ಭೇಟಿ ನೀಡಿದ್ದರೆ ಈ ವರ್ಷ ಮಾರ್ಚ್ 2ರವರೆಗೆ 27,224 ಭಾರತೀಯ ಪ್ರವಾಸಿಗರು ಮಾಲ್ದೀವ್ಸ್ಗೆ ಭೇಟಿ ನೀಡಿದ್ದು ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ 13,830 ಕುಸಿತ ದಾಖಲಾಗಿದೆ. ಲಕ್ಷದ್ವೀಪಕ್ಕೆ ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಭಾರತದ ಸರಕಾರ ಕೈಗೊಂಡ ಅಭಿಯಾನ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ವರದಿ ಹೇಳಿದೆ.
2023ರ ಮಾರ್ಚ್ವರೆಗೆ ಭಾರತವು ಮಾಲ್ದೀವ್ಸ್ಗೆ ಪ್ರವಾಸೋದ್ಯಮದ ಎರಡನೇ ಅತೀ ದೊಡ್ಡ ಮೂಲವಾಗಿದ್ದು ಆ ದೇಶ ಪ್ರವಾಸೋದ್ಯಮದಿಂದ ಗಳಿಸುವ ಆದಾಯದಲ್ಲಿ 10% ಭಾರತೀಯ ಪ್ರವಾಸಿಗರಿಂದ ಬರುತ್ತಿತ್ತು. 2021, 2022 ಮತ್ತು 2023ರಲ್ಲಿ ಭಾರತ ಅಗ್ರಸ್ಥಾನದಲ್ಲಿತ್ತು. ಆದರೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ವಿವಾದ ಉಲ್ಬಣಿಸಿದ ಬಳಿಕ ಭಾರತ 6ನೇ ಸ್ಥಾನಕ್ಕೆ ಕುಸಿಯಿತು. ಭಾರತದ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ದಾಖಲಾದರೆ ಚೀನಾದ ಪ್ರವಾಸಿಗರ ಪ್ರಮಾಣದಲ್ಲಿ ದಿಢೀರನೆ ಏರಿಕೆಯಾಗಿದೆ. ಚೀನಾ-ಮಾಲ್ದೀವ್ಸ್ ನಡುವಿನ ದ್ವಿಪಕ್ಷೀಯ ಬಾಂಧವ್ಯ ಬಲಗೊಳ್ಳುತ್ತಿದ್ದಂತೆಯೇ 2024ರ ಮಾರ್ಚ್ 4ರ ವೇಳೆಗೆ ಚೀನಾದ 54,000ಕ್ಕೂ ಅಧಿಕ ಪ್ರವಾಸಿಗರು ಮಾಲ್ದೀವ್ಸ್ಗೆ ಭೇಟಿ ನೀಡಿದ್ದು ಮಾಲ್ದೀವ್ಸ್ಗೆ ಭೇಟಿ ನೀಡುವವರಲ್ಲಿ ಚೀನೀಯರು ಈಗ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವರ್ಷದ ಫೆಬ್ರವರಿ ಅಂತ್ಯದವರೆಗೆ ಮಾಲ್ದೀವ್ಸ್ಗೆ ಒಟ್ಟು 2,17,394 ಪ್ರವಾಸಿಗರು ಆಗಮಿಸಿದ್ದು ಇದರಲ್ಲಿ 34,600 ಚೀನಾದ ಪ್ರಜೆಗಳು ಎಂದು ವರದಿ ಹೇಳಿದೆ.