ರಕ್ಷಣಾ ಸಹಕಾರ ಹೆಚ್ಚಿಸಲು ಮಾಲ್ದೀವ್ಸ್, ಚೀನಾ ಮಾತುಕತೆ
ಮಾಲ್ದೀವ್ಸ್ ರಕ್ಷಣಾ ಸಚಿವ ಘಾಸನ್ ಮೌಮೂನ್ , ಚೀನಾದ ರಕ್ಷಣಾ ಸಚಿವ ಅಡ್ಮಿರಲ್ ಡಾಂಗ್ ಜುನ್ (Photo: X/@MoDmv)
ಬೀಜಿಂಗ್ : ಮಾಲ್ದೀವ್ಸ್ ಮತ್ತು ಚೀನಾ ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿವೆ ಎಂದು ಮಾಲ್ದೀವ್ಸ್ ನ ರಕ್ಷಣಾ ಇಲಾಖೆ ಹೇಳಿದೆ.
ಬೀಜಿಂಗ್ನಲ್ಲಿ ನಡೆಯುತ್ತಿರುವ 11ನೇ ಬೀಜಿಂಗ್ ಕ್ಸಿಯಾಂಗ್ಶಾನ್ ವೇದಿಕೆಯ ಶೃಂಗಸಭೆಯ ನೇಪಥ್ಯದಲ್ಲಿ ಮಾಲ್ದೀವ್ಸ್ ರಕ್ಷಣಾ ಸಚಿವ ಘಾಸನ್ ಮೌಮೂನ್ ಚೀನಾದ ರಕ್ಷಣಾ ಸಚಿವ ಅಡ್ಮಿರಲ್ ಡಾಂಗ್ ಜುನ್ರನ್ನು ಭೇಟಿಯಾಗಿದ್ದರು. ಈ ಸಂದರ್ಭ ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಚೀನಾಕ್ಕೆ ಮಾಲ್ದೀವ್ಸ್ ರಾಯಭಾರಿ ಡಾ. ಫಜೀಲ್ ನಜೀಬ್ ಅವರೂ ಈ ಸಂದರ್ಭ ಉಪಸ್ಥಿತರಿದ್ದರು ಎಂದು ಹೇಳಿಕೆ ತಿಳಿಸಿದೆ. ಮಾಲ್ದೀವ್ಸ್ ನ ಮಿಲಿಟರಿ ಮತ್ತು ಭದ್ರತಾ ಸೇವೆಗಳಿಗೆ ಮಿಲಿಟರಿ ನೆರವು ಒದಗಿಸುವ ಬಗ್ಗೆ ಮಾರ್ಚ್ನಲ್ಲಿ ಮಾಲ್ದೀವ್ಸ್ ಮತ್ತು ಚೀನಾ ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದಡಿ ಚೀನಾವು ಮಾಲ್ದೀವ್ಸ್ ಗೆ ಮಿಲಿಟರಿ ಸಾಧನ ಹಾಗೂ ತರಬೇತಿಯನ್ನು ಒದಗಿಸಲಿದೆ ಎಂದು ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಹೇಳಿದ್ದಾರೆ.