ಮಾಲ್ಡೀವ್ಸ್ ವಿದೇಶಾಂಗ ಸಚಿವ ಮುಂದಿನ ವಾರ ಭಾರತ ಭೇಟಿ
Photo:X /corporatemv
ಹೊಸದಿಲ್ಲಿ: ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಝಮೀರ್ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಉಭಯ ದೇಶಗಳ ರಾಜತಾಂತ್ರಿಕರು ಝಮೀರ್ ಭೇಟಿಗೆ ದಿನಾಂಕವನ್ನು ಅಂತಿಮಪಡಿಸುವ ನಿಟ್ಟಿನಲ್ಲಿ ಸಂಪರ್ಕದಲ್ಲಿದ್ದು, ಮುಂದಿನ ವಾರವೇ ಝಮೀರ್ ಭೇಟಿ ನೀಡುವ ಸಾಧ್ಯತೆಯೂ ಇದೆ ಎಂದು ಉನ್ನತ ಮೂಲಗಳು ಹೇಳಿವೆ.
ಝಮೀರ್ ಭಾರತಕ್ಕೆ ಭೇಟಿ ನೀಡಿದಲ್ಲಿ, ಚೀನಾ ಪರ ಒಲವು ಹೊಂದಿರುವ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಕಳೆದ ವರ್ಷ ಅಧಿಕಾರ ವಹಿಸಿಕೊಂಡ ಬಳಿಕ ನೀಡುವ ಮೊಟ್ಟಮೊದಲ ಉನ್ನತ ಮಟ್ಟದ ಭೇಟಿ ಇದಾಗಿರುತ್ತದೆ. ಭಾರತ ಸ್ನೇಹಿ ಅಧ್ಯಕ್ಷ ಇಬ್ರಾಹಿಂ ಸ್ವಾಲಿಹ್ ಅವರನ್ನು ಸೋಲಿಸಿ ಕಳೆದ ವರ್ಷ ಮುಯಿಝ್ಝು ಅಧಿಕಾರಕ್ಕೆ ಬಂದಿದ್ದರು.
ಭಾರತದ ಜತೆ ರಕ್ಷಣೆ ಮತ್ತು ಭದ್ರತಾ ಸಹಕಾರವನ್ನು ಸೀಮಿತಗೊಳಿಸುವ ನಿಟ್ಟಿನಲ್ಲಿ ಮುಯಿಝ್ಝು ಕ್ರಮಗಳನ್ನು ಕೈಗೊಂಡಿದ್ದು, ಸಾಗರ ಪ್ರದೇಶದ ನೆರೆಯ ದೇಶದೊಂದಿಗೆ ಭಾರತದ ಸಂಬಂಧ ಹದಗೆಟ್ಟಿದೆ. ಮಾಲ್ಡೀವ್ಸ್ ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಭಾರತೀಯ ಪಡೆಗಳನ್ನು ವಾಪಾಸು ಕರೆಸಿಕೊಳ್ಳಲು ಮಾಲ್ಡೀವ್ಸ್ ಸೂಚಿಸಿತ್ತು. ಜತೆಗೆ ಮಾಲ್ಡೀವ್ಸ್ ಜಲಪ್ರದೇಶದಲ್ಲಿ ಭಾರತೀಯ ನೌಕಾಡೆ ನಡೆಸಲು ಉದ್ದೇಶಿಸದ್ದ ಹೈಡ್ರೋಗ್ರಾಫಿಕ್ ಸರ್ವೆಗೆ ಅವಕಾಶ ಮಾಡಿಕೊಡುವ ದ್ವಿಪಕ್ಷೀಯ ಒಪ್ಪಂದದಿಂದಲೂ ಮಾಲ್ಡೀವ್ಸ್ ಹೊರಬಂದಿತ್ತು.
ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ನಡುವೆಯೇ ಝಮೀರ್ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡನೇ ಅವಧಿಯಲ್ಲಿ ಆತಿಥ್ಯ ನೀಡುವ ಕೊನೆಯ ಉನ್ನತ ಮಟ್ಟದ ವಿದೇಶಿ ಗಣ್ಯರೆನಿಸಿಕೊಳ್ಳಲಿದ್ದಾರೆ. ಭಾರತದ ಪಡೆಗಳನ್ನು ವಾಪಾಸು ಕರೆಸಿಕೊಳ್ಳಲು ಮಾಲೆ, ಮೇ 10ರ ಗಡುವು ನೀಡಿದ್ದು, ಈ ಹಿನ್ನೆಲೆಯಲ್ಲಿ ಕೂಡಾ ಭೇಟಿ ವಿಶೇಷ ಮಹತ್ವ ಪಡೆದಿದೆ.