ಇಸ್ರೇಲ್ ಪ್ರಜೆಗಳಿಗೆ ಮಾಲ್ದೀವ್ಸ್ ಪ್ರವೇಶಕ್ಕೆ ನಿಷೇಧ : ವರದಿ
ಫೆಲೆಸ್ತೀನಿಗೆ ಸಹಾಯ ಹಸ್ತ ಚಾಚಲು ನಿಧಿ ಸಂಗ್ರಹಣೆ ಮಾಡಲಿರುವ ದ್ವೀಪ ರಾಷ್ಟ್ರ
Photo : NDTV
ಮಾಲೆ : ಫೆಲೆಸ್ತೀನ್, ಗಾಝಾಪಟ್ಟಿಯ ಮೇಲಿನ ಇಸ್ರೇಲ್ ನಿಂದ ನಡೆಯುತ್ತಿರುವ ಬಾಂಬ್ ದಾಳಿಗೆ ಪ್ರತಿಕ್ರಿಯೆಯಾಗಿ ಮಾಲ್ದೀವ್ಸ್, ಇಸ್ರೇಲಿ ಪಾಸ್ಪೋರ್ಟ್ ಹೊಂದಿರುವವರು ಮಾಲ್ದೀವ್ಸ್ ಪ್ರವೇಶಿಸುವುದಕ್ಕೆ ನಿಷೇಧ ಹೇರಿದೆ ಎಂದು timesofindia ವರದಿ ಮಾಡಿದೆ.
ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝ ಅವರು ಕ್ಯಾಬಿನೆಟ್ ಸಭೆಯಲ್ಲಿ ಈ ನಿಷೇಧವನ್ನು ಜಾರಿಗೊಳಿಸಲು ಅಗತ್ಯವಾದ ಕಾನೂನು ಬದಲಾವಣೆಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ತಂತ್ರಜ್ಞಾನದ ಸಚಿವ ಅಲಿ ಇಹುಸನ್ ಹೇಳಿದ್ದಾರೆ. ಈ ನಿರ್ಧಾರವನ್ನು ಜಾರಿಗೆ ತರಲು ವಿಶೇಷ ಸಚಿವ ಸಂಪುಟ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, ಮಾಲ್ದೀವ್ಸ್ ಅಧ್ಯಕ್ಷರ ಕಚೇರಿಯು, "ಅಧ್ಯಕ್ಷ ಡಾ ಮುಹಮ್ಮದ್ ಮುಯಿಝ್ಝ, ಕ್ಯಾಬಿನೆಟ್ನ ಶಿಫಾರಸಿನ ನಂತರ, ಇಸ್ರೇಲಿ ಪಾಸ್ಪೋರ್ಟ್ ಗಳ ಮೇಲೆ ನಿಷೇಧವನ್ನು ಹೇರಲು ನಿರ್ಧರಿಸಿದ್ದಾರೆ. ಇಸ್ರೇಲಿ ಪಾಸ್ಪೋರ್ಟ್ ಹೊಂದಿರುವವರು ಮಾಲ್ದೀವ್ಸ್ಗೆ ಪ್ರವೇಶಿಸುವುದನ್ನು ತಡೆಯಲು ಅಗತ್ಯ ಕಾನೂನುಳಿಗೆ ತಿದ್ದುಪಡಿ ಮಾಡಲಾಗುವುದು. ಇದರ ಮೇಲ್ವಿಚಾರಣೆಗಾಗಿ ಕ್ಯಾಬಿನೆಟ್ ಉಪಸಮಿತಿಯನ್ನು ಸ್ಥಾಪಿಸಲಾಗುವುದು”, ಎಂದು ತಿಳಿಸಿದೆ.
ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ಫೆಲೆಸ್ತೀನ್ ಗೆ ಸಹಕಾರ ನೀಡಲು ಮಾಲ್ದೀವ್ಸ್ ವಿಶೇಷ ರಾಯಭಾರಿಯನ್ನು ನೇಮಿಸಲಿದೆ ಎಂದು ತಿಳಿದು ಬಂದಿದೆ. ಯುದ್ಧ ಪೀಡಿತ ಫೆಲೆಸ್ತೀನ್ ಜನರಿಗೆ ಸಹಾಯ ಮಾಡಲು ನಿಧಿಸಂಗ್ರಹಣೆ ಕಾರ್ಯಕ್ರಮಗಳನ್ನು ಆಯೋಜಿಸಲು ಮಾಲ್ದೀವ್ಸ್ ನಿರ್ಧರಿಸಿದೆ. ಯುನೈಟೆಡ್ ನೇಷನ್ಸ್ ರಿಲೀಫ್ ಆಂಡ್ ವರ್ಕ್ಸ್ ಏಜೆನ್ಸಿ ಫಾರ್ ಫೆಲೆಸ್ತೀನ್ ರೆಫ್ಯೂಜೀಸ್ ಇನ್ ಈಸ್ಟ್ (UNRWA) ನ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ಫೆಲೆಸ್ತೀನ್ ಸಮಸ್ಯೆಗೆ ತ್ವರಿತ ಪರಿಹಾರವನ್ನು ಪಡೆಯಲು ಇತರ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರದೊಂದಿಗೆ "ಮಾಲ್ದೀವಿಯನ್ಸ್ ವಿತ್ ಫೆಲೆಸ್ತೀನ್" ಎಂಬ ಶೀರ್ಷಿಕೆಯಡಿ ರಾಷ್ಟ್ರೀಯ ಮೆರವಣಿಗೆಯನ್ನು ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.
ಸೌಜನ್ಯ : Timesofindia