ಮಾಲ್ದೀವ್ಸ್: ವಾಗ್ದಂಡನೆ ಪ್ರಶ್ನಿಸಿ ಸುಪ್ರೀಂ ಮೆಟ್ಟಲೇರಿದ ಸರಕಾರ
Photo: Thewire.com
ಮಾಲೆ: ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ವಿರುದ್ಧ ಸಂಸತ್ನಲ್ಲಿ ವಾಗ್ದಂಡನೆ ನಿರ್ಣಯ ಮಂಡಿಸಲು ಬಹುಮತ ಹೊಂದಿರುವ ಪ್ರಮುಖ ವಿರೋಧ ಪಕ್ಷ `ಮಾಲ್ದೀವ್ಸ್ ಡೆಮೊಕ್ರಟಿಕ್ ಪಕ್ಷ'(ಎಂಡಿಪಿ) ಘೋಷಿಸಿರುವಂತೆಯೇ, ಇದನ್ನು ಪ್ರಶ್ನಿಸಿ ಸರಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ವಾಗ್ದಂಡನೆ ನಿರ್ಣಯ ಮಂಡನೆಯನ್ನು ಸುಲಭಗೊಳಿಸುವ ತಿದ್ದುಪಡಿ ಮಸೂದೆಯನ್ನು ಮಾಲ್ದೀವ್ಸ್ ಸಂಸತ್ ಇತ್ತೀಚೆಗೆ ಅನುಮೋದಿಸಿತ್ತು. ಇದರ ಪ್ರಕಾರ, ಸಂಸತ್ ಸದಸ್ಯರ ಸಂಖ್ಯೆ ಈಗ 87ರ ಬದಲು 80 ಆಗಿರುವುದರಿಂದ ನಿರ್ಣಯಕ್ಕೆ 54 ಸದಸ್ಯರು ಸಹಿ ಹಾಕಿದರೆ ಅಧ್ಯಕ್ಷರನ್ನು ವಾಗ್ದಂಡನೆಗೆ ಒಳಗಾಗಿಸಬಹುದಾಗಿದೆ.
ತಿದ್ದುಪಡಿಯನ್ನು ಪ್ರಶ್ನಿಸಿ ಸರಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ. 87 ಸದಸ್ಯ ಬಲದ ಸಂಸತ್ಗೆ 7 ವಿಪಕ್ಷ ಸದಸ್ಯರು ನವೆಂಬರ್ ನಲ್ಲಿ ರಾಜೀನಾಮೆ ನೀಡಿದ್ದು ಇವರಿಗೆ ಮುಯಿಝ್ಝ ಸರಕಾರ ಉನ್ನತ ಸ್ಥಾನಮಾನದ ಭರವಸೆ ನೀಡಿತ್ತು. ಆದರೆ ಈ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ನಿರಾಕರಿಸಿತ್ತು. ಇದರಿಂದ ಸಂಸತ್ ಸದಸ್ಯರ ಸಂಖ್ಯೆ 80ಕ್ಕೆ ಇಳಿದಿರುವುದರಿಂದ ವಾಗ್ದಂಡನೆಗೆ 54 ಸದಸ್ಯರ ಸಹಿ ಸಾಕಾಗುತ್ತದೆ ಎಂದು ತಿದ್ದುಪಡಿ ಮಾಡಲಾಗಿದೆ. ಪ್ರಮುಖ ವಿರೋಧ ಪಕ್ಷಗಳಾದ ಎಂಡಿಪಿ 43 ಮತ್ತು ಡೆಮೊಕ್ರಾಟ್ಸ್ 13 ಸದಸ್ಯರನ್ನು ಹೊಂದಿರುವುದರಿಂದ ಅಗತ್ಯ ಬಹುಮತವನ್ನು ವಿರೋಧ ಪಕ್ಷಗಳ ಒಕ್ಕೂಟ ಹೊಂದಿದೆ.