ಮಾಲಿ: ಶಾಂತಿಪಾಲನಾ ಕಾರ್ಯಾಚರಣೆ ಅಂತ್ಯಕ್ಕೆ ವಿಶ್ವಸಂಸ್ಥೆ ನಿರ್ಣಯ
ಸಾಂದರ್ಭಿಕ ಚಿತ್ರ \ Photo: PTI
ನ್ಯೂಯಾರ್ಕ್: ಮಾಲಿ ದೇಶದ ಸೇನಾಡಳಿತದ ಆಗ್ರಹದಂತೆ ಆ ದೇಶದಲ್ಲಿರುವ ತನ್ನ ಶಾಂತಿಪಾಲನಾ ಕಾರ್ಯಾಚರಣೆಯನ್ನು ತಕ್ಷಣದಿಂದಲೇ ಅಂತ್ಯಗೊಳಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮೋದಿಸಿದೆ.
ಪಶ್ಚಿಮ ಆಫ್ರಿಕಾದಲ್ಲಿ ಭೂಪ್ರದೇಶಗಳಿಂದ ಸುತ್ತುವರಿದಿರುವ ದೇಶವಾಗಿರುವ ಮಾಲಿ ಕಳೆದೊಂದು ದಶಕದಿಂದ ಅಂತರ್ಯುದ್ಧದಿಂದ ನಲುಗಿದ್ದು ಕಾನೂನು ಸುವ್ಯವಸ್ಥೆಗೆ ನೆರವಾಗಲು ವಿಶ್ವಸಂಸ್ಥೆ ತನ್ನ ಶಾಂತಿಪಾಲನಾ ನಿಯೋಗವನ್ನು ನಿಯೋಜಿಸಿದೆ. ಆದರೆ ರಶ್ಯದ ಖಾಸಗಿ ಹೋರಾಟಗಾರರ ಪಡೆ ವ್ಯಾಗ್ನರ್ ಗುಂಪನ್ನು ಕರೆಸಿಕೊಂಡಿರುವ ಮಾಲಿಯ ಸೇನಾಡಳಿತ, ವಿಶ್ವಸಂಸ್ಥೆ ಶಾಂತಿಪಾಲನಾ ನಿಯೋಗ ದೇಶಬಿಟ್ಟು ತೆರಳುವಂತೆ ಆಗ್ರಹಿಸುತ್ತಿದೆ. ವ್ಯಾಗ್ನರ್ ಗುಂಪು ಉಕ್ರೇನ್ ವಿರುದ್ಧದ ಹೋರಾಟದಲ್ಲಿ ರಶ್ಯದ ಪರ ಕೈಜೋಡಿಸಿರುವುದರಿಂದ ಇದೀಗ ಮಾಲಿಯ ಸೇನಾಡಳಿತದಿಂದ ಅಂತರಾಷ್ಟ್ರೀಯ ಸಮುದಾಯ ಅಂತರ ಕಾಯ್ದುಕೊಂಡಿದೆ.
ಮಾಲಿಯಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಾಚರಣೆ ಅಂತ್ಯಗೊಳಿಸುವ ನಿರ್ಣಯವನ್ನು ಫ್ರಾನ್ಸ್ ಮಂಡಿಸಿದ್ದು ಇದನ್ನು 15-0 ಮತಗಳಿಂದ ಅನುಮೋದಿಸಲಾಗಿದೆ. ಇದರಂತೆ ಮಾಲಿಯಲ್ಲಿರುವ ವಿಶ್ವಸಂಸ್ಥೆಯ 15,000ಕ್ಕೂ ಅಧಿಕ ಸಿಬಂದಿಗಳನ್ನು ವಾಪಾಸು ಪಡೆಯುವ ಪ್ರಕ್ರಿಯೆಗೆ ಶನಿವಾರ ಚಾಲನೆ ದೊರಕಿದ್ದು ಈ ವರ್ಷಾಂತ್ಯದೊಳಗೆ ಅಂತ್ಯವಾಗಲಿದೆ. ದೇಶದಲ್ಲಿ 2024ರ ಫೆಬ್ರವರಿಯಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ನಡೆಸಲು ಅಲ್ಲಿನ ಸೇನಾಡಳಿತ ಬದ್ಧವಾಗಿರುವುದು ಸ್ವಾಗತಾರ್ಹ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ವಿಶ್ವಸಂಸ್ಥೆ ನಿಯೋಗವನ್ನು ತಿರಸ್ಕರಿಸುವ ಮಾಲಿ ಸೇನಾಡಳಿತದ ನಿರ್ಧಾರಕ್ಕೆ ಅಮೆರಿಕದ ಉಪ ರಾಯಭಾರಿ ಜೆಫ್ರಿ ಡೆಲಾರೆಂಟಿಸ್ ವಿಷಾದ ಸೂಚಿಸಿದ್ದಾರೆ. ಮಾಲಿಯ ಕೆಲವು ಸ್ಥಳೀಯ ಶಕ್ತಿಗಳು ಶಾಂತಿಪಾಲನಾ ಪಡೆಯ ಮೇಲೆ ದಾಳಿಗೆ ಕರೆ ನೀಡಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ ಎಂದ ಅವರು ವಿಶ್ವಸಂಸ್ಥೆಯ ಸಾಧನಗಳು ಹಾಗೂ ವ್ಯವಸ್ಥೆಯನ್ನು ವಿಶ್ವಸಂಸ್ಥೆ ನಿಯೋಜಿತ ಪ್ರದೇಶಕ್ಕೆ ಸುರಕ್ಷಿತ ಮತ್ತು ವ್ಯವಸ್ಥಿತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ನಿಯೋಗವನ್ನು ಆಗ್ರಹಿಸಿದ್ದಾರೆ. ಪಶ್ಚಿಮ ಆಫ್ರಿಕಾ ಪ್ರಾಂತದಲ್ಲಿ ಅಸ್ಥಿರತೆ ಮತ್ತು ಮಾನವೀಯ ನೆರವಿನ ಅಗತ್ಯ ಹೆಚ್ಚುತ್ತಿರುವ ಈ ಸಂದರ್ಭದಲ್ಲೇ ಶಾಂತಿಪಾಲನಾ ಪಡೆ ದೇಶದಿಂದ ತೆರಳಬೇಕೆಂದು ಮಾಲಿ ಬಯಸುತ್ತಿರುವುದು ವಿಷಾದನೀಯ. ವ್ಯಾಗ್ನರ್ ಗುಂಪಿನೊಂದಿಗೆ ಪಾಲುದಾರಿಕೆ ದೇಶದ ಹಿತಾಸಕ್ತಿ ಮತ್ತು ಸ್ಥಿರತೆಗೆ ಪೂರಕವಾಗುತ್ತದೆ ಎಂಬ ವಿಶ್ವಾಸವಿಲ್ಲ ಎಂದು ಬ್ರಿಟಿಷ್ ರಾಯಭಾರಿ ಬಾರ್ಬರಾ ವುಡ್ವರ್ಡ್ ಹೇಳಿದ್ದಾರೆ.
ಮಾಲಿ 2012ರಿಂದ ಇಸ್ಲಾಮಿಕ್ ಉಗ್ರಗಾಮಿಗಳ ದಂಗೆಯನ್ನು ತಡೆಯಲು ಹೆಣಗಾಡುತ್ತಿದ್ದು ದೇಶದ ಉತ್ತರ ಪ್ರಾಂತದಲ್ಲಿ ಬಂಡುಗೋರರು ಪ್ರಬಲರಾಗಿದ್ದಾರೆ. ಅದೇ ವರ್ಷ ವಿಶ್ವಸಂಸ್ಥೆಯ ಶಾಂತಿಪಾಲನಾ ನಿಯೋಗ ಮಾಲಿಗೆ ಆಗಮಿಸಿದೆ. ಈ ಮಧ್ಯೆ, 2020ರಲ್ಲಿ ಕರ್ನಲ್ ಅಸೀಮಿ ಗೊಯಿತಾ ನೇತೃತ್ವದಲ್ಲಿ ಸೇನೆ ಕ್ಷಿಪ್ರಕ್ರಾಂತಿ ನಡೆಸಿ ಆಡಳಿತವನ್ನು ಕೈಗೆತ್ತಿಕೊಂಡಿದೆ.
ಮಾಲಿಯಲ್ಲಿ 10 ವರ್ಷದ ಶಾಂತಿಪಾಲನಾ ಕಾರ್ಯಾಚರಣೆಯ ಸಂದರ್ಭ ಮೃತಪಟ್ಟಿರುವ 309 ಸಿಬಂದಿಗಳಿಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
ನಿರಂತರ 10 ವರ್ಷದ ಕಾರ್ಯಾಚರಣೆಯ ಹೊರತಾಗಿಯೂ ಶಾಂತಿಪಾಲನಾ ನಿಯೋಗ ದೇಶದಲ್ಲಿ ಭದ್ರತೆಯನ್ನು ಖಾತರಿಪಡಿಸುವಲ್ಲಿ ವಿಫಲವಾಗಿರುವುದರಿಂದ ಅದರ ಅಗತ್ಯ ದೇಶಕ್ಕೆ ಇಲ್ಲ. ಶಾಂತಿಪಾಲನಾ ನಿಯೋಗ ಹಾಗೂ ಮಾಲಿ ಅಧಿಕಾರಿಗಳ ನಡುವೆ ವಿಶ್ವಾಸದ ವಾತಾವರಣ ಉಳಿದಿಲ್ಲ' ಎಂದು ಮಾಲಿಯ ವಿದೇಶಾಂಗ ಸಚಿವ ಅಬ್ದುಲ್ಲಾ ಡಿಯೋಪ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದೀಗ ಶಾಂತಿಪಾಲನಾ ನಿಯೋಗವನ್ನು ವಾಪಾಸು ಪಡೆದುಕೊಳ್ಳುವ ನಿರ್ಧಾರವನ್ನು ಸ್ವಾಗತಿಸಿರುವ ಮಾಲಿಯ ರಾಯಭಾರಿ ಇಸಾ ಕೊಂಫೊರೊವ್, ವಿಶ್ವಸಂಸ್ಥೆ ನಿಯೋಗವು ತನ್ನ ಮೂಲ ಉದ್ದೇಶದಲ್ಲಿ ವಿಫಲವಾಗಿದ್ದರೂ, ಮಾನವೀಯ ಮತ್ತು ಸಾಮಾಜಿಕ ನೆರವಿನ ಕ್ಷೇತ್ರದಲ್ಲಿ ನಿಯೋಗದ ಕಾರ್ಯ ಶ್ಲಾಘನಾರ್ಹವಾಗಿದೆ ಎಂದಿದ್ದಾರೆ.
ಮಾಲಿಯಲ್ಲಿನ ಭದ್ರತೆ ಮತ್ತು ಸ್ಥಿರತೆಗೆ ರಶ್ಯ ನೆರವಾಗಲಿದೆ ಎಂದು ವಿಶ್ವಸಂಸ್ಥೆಯಲ್ಲಿನ ರಶ್ಯದ ಸಹಾಯಕ ರಾಯಭಾರಿ ಅನ್ನಾ ಎವ್ಸ್ಟಿಗ್ನಿವಾ ಹೇಳಿದ್ದಾರೆ.