ತಪ್ಪಾಗಿ ಜೈಲುಶಿಕ್ಷೆಗೊಳಗಾದ ವ್ಯಕ್ತಿ 48 ವರ್ಷಗಳ ಬಳಿಕ ಬಿಡುಗಡೆ
Photo Credit : GoFundMe
ವಾಷಿಂಗ್ಟನ್: ಕೊಲೆ ಆರೋಪಿಯೆಂದು ತಪ್ಪಾಗಿ ಶಿಕ್ಷೆಗೊಳಗಾದ ವ್ಯಕ್ತಿಯನ್ನು 48 ವರ್ಷಗಳ ಬಳಿಕ ದೋಷಮುಕ್ತಗೊಳಿಸಿ ಮಂಗಳವಾರ ಬಿಡುಗಡೆಗೊಳಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಮದ್ಯದ ಅಂಗಡಿ ದರೋಡೆಗೆ ಸಂಬಂಧಿಸಿದ ಪ್ರಕರಣದಲ್ಲಿ ಓಕ್ಲಹೊಮಾ ನಿವಾಸಿ ಗ್ಲಿನಿನ್ ಸಿಮನ್ಸ್ಗೆ(ಈಗ 70 ವರ್ಷ) 1975ರಲ್ಲಿ 48 ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು. ಓಕ್ಲಹೊಮಾದ ಎಡ್ಮಂಡ್ ನಗರದಲ್ಲಿ 1974ರ ಡಿಸೆಂಬರ್ ನಲ್ಲಿ ನಡೆದ ಮದ್ಯದಂಗಡಿ ದರೋಡೆಯಲ್ಲಿ ಅಂಗಡಿಯ ಗುಮಾಸ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಘಟನೆಯಲ್ಲಿ ಗಾಯಗೊಂಡಿದ್ದ ಯುವಕನೋರ್ವನ ಹೇಳಿಕೆಯನ್ನು ಆಧರಿಸಿ ಸಿಮನ್ಸ್ ಮತ್ತು ಕ್ಲಾರ್ಕ್ ರಾಬರ್ಟ್ನನ್ನು ಬಂಧಿಸಿ ಅಪರಾಧಿಗಳೆಂದು ನಿರ್ಣಯಿಸಿ ಜೈಲುಶಿಕ್ಷೆ ವಿಧಿಸಲಾಗಿತ್ತು. ಆ ಯುವಕ ಬಳಿಕ ಪೊಲೀಸ್ ಠಾಣೆಯಲ್ಲಿ ಅಪರಾಧಿಗಳನ್ನು ಗುರುತಿಸುವ ಸಂದರ್ಭ ಇತರ ವ್ಯಕ್ತಿಗಳನ್ನೂ ಸೂಚಿಸಿದ್ದ.
ದರೋಡೆ ಮತ್ತು ಹತ್ಯೆ ಸಂದರ್ಭ ತಾನು ಲೂಸಿಯಾನಾದಲ್ಲಿದ್ದೆ ಎಂದು ಸಿಮನ್ಸ್ ನೀಡಿದ್ದ ಹೇಳಿಕೆಯನ್ನು ನ್ಯಾಯಾಲಯ ತಳ್ಳಿಹಾಕಿತ್ತು. ಸಹ ಅಪರಾಧಿ ರಾಬರ್ಟ್ನನ್ನು 2008ರಲ್ಲಿ ಪೆರೋಲ್ ಮೇಲೆ ಬಿಡುಗಡೆಗೊಳಿಸಲಾಗಿದೆ.
ಸಿಮನ್ಸ್ ಅವರ ವಕೀಲರಿಗೆ ನಿರ್ಣಾಯಕ ಸಾಕ್ಷ್ಯದ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಈ ವರ್ಷದ ಜುಲೈಯಲ್ಲಿ ನಡೆದ ವಿಚಾರಣೆ ಸಂದರ್ಭ ಕಂಡುಬಂದ ಹಿನ್ನೆಲೆಯಲ್ಲಿ ಸಿಮನ್ಸ್ ಮೇಲಿದ್ದ ಕೊಲೆ ಆರೋಪವನ್ನು ಖುಲಾಸೆಗೊಳಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ತಪ್ಪು ಶಿಕ್ಷೆಗೆ ಒಳಗಾಗಿ ದೀರ್ಘಾವಧಿ ಜೈಲಿನಲ್ಲಿದ್ದ ದಾಖಲೆಯನ್ನು ಬರೆದಿರುವ ಸಿಮನ್ಸ್ `ಇದು ಮರಳಿ ಚೇತರಿಸಿಕೊಳ್ಳುವ ಮತ್ತು ದೃಢತೆಯ ಪಾಠವಾಗಿದೆ. ಯಾವುದೂ ಅಸಂಭವ ಎಂದು ನಾವು ಭಾವಿಸಬಾರದು' ಎಂದು ಪ್ರತಿಕ್ರಿಯಿಸಿದ್ದಾರೆ.
ಓಕ್ಲಹೊಮಾದಲ್ಲಿ ಮಾಡದ ತಪ್ಪಿಗೆ ಜೈಲಿನಲ್ಲಿ ಶಿಕ್ಷೆ ಅನುಭವಿಸಿದವರು 175,000 ಡಾಲರ್ ಪರಿಹಾರ ಪಡೆಯಲು ಅರ್ಹರು ಎಂಬ ಕಾನೂನಿದೆ ಎಂದು ವರದಿ ಹೇಳಿದೆ.