ಗಾಝಾ ಒಪ್ಪಂದಕ್ಕೆ ಆಗ್ರಹಿಸಿ ಇಸ್ರೇಲ್ನಲ್ಲಿ ಬೃಹತ್ ಪ್ರತಿಭಟನೆ
PC : X/@PressTV
ಟೆಲ್ಅವೀವ್ : ಗಾಝಾದಲ್ಲಿ ಒತ್ತೆಸೆರೆಯಲ್ಲಿ ಇರುವವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಂತೆ ಸರಕಾರದ ಮೇಲೆ ಒತ್ತಡ ಹೆಚ್ಚಿಸುವ ನಿಟ್ಟಿನಲ್ಲಿ ಇಸ್ರೇಲ್ನ ಪ್ರಮುಖ ನಗರಗಳಲ್ಲಿ ಬೃಹತ್ ಪ್ರತಿಭಟನೆ ನಡೆದಿರುವುದಾಗಿ ವರದಿಯಾಗಿದೆ.
ದಕ್ಷಿಣ ಇಸ್ರೇಲ್ ಮೇಲೆ ಕಳೆದ ಅಕ್ಟೋಬರ್ 7ರಂದು ನಡೆದ ಹಮಾಸ್ ದಾಳಿಯ ಬಳಿಕ ಗಾಝಾದಲ್ಲಿ ಒತ್ತೆಯಾಳಾಗಿ ಇದ್ದ 251 ಮಂದಿಯಲ್ಲಿ 97 ಮಂದಿ ಇನ್ನೂ ಒತ್ತೆಸೆರೆಯಲ್ಲಿದ್ದು ಇವರಲ್ಲಿ 33 ಮಂದಿ ಮೃತಪಟ್ಟಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಈ ತಿಂಗಳ ಆರಂಭದಲ್ಲಿ ಗಾಝಾದ ಸುರಂಗವೊಂದರಲ್ಲಿ 6 ಒತ್ತೆಯಾಳುಗಳ ಮೃತದೇಹ ಪತ್ತೆಯಾಗಿರುವುದಾಗಿ ಇಸ್ರೇಲ್ ಸೇನೆ ಹೇಳಿತ್ತು. ಈ ಘಟನೆಯ ಬಳಿಕ ಒತ್ತೆಯಾಳುಗಳ ಬಿಡುಗಡೆಗೆ ಆಗ್ರಹಿಸಿ ಇಸ್ರೇಲ್ನಲ್ಲಿ ಸರಣಿ ಪ್ರತಿಭಟನೆ ನಡೆಯುತ್ತಿದೆ. ಇನ್ನೂ ಜೀವಂತವಾಗಿ ಉಳಿದಿರುವ ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರಕಾರ ತಡೆಯಾಗಿದೆ ಎಂಬ ಟೀಕೆ, ಅಸಮಾಧಾನ ಹೆಚ್ಚಿದೆ. `ಉಳಿದ ಒತ್ತೆಯಾಳುಗಳನ್ನು ಜೀವಂತವಾಗಿ ಕರೆತರಲು ಈಗಲೂ ಅವಕಾಶವಿದೆ. ಒಪ್ಪಂದದ ಮೂಲಕ ಅವರ ಜೀವ ಉಳಿಸಲು ಸಾಧ್ಯವಿದೆ' ಎಂದು ಒತ್ತೆಸೆರೆಯಲ್ಲಿ ಮೃತಪಟ್ಟಿದ್ದ ಅಲೆಕ್ಸಾಂಡರ್ ಲೊಬನೋವ್ ಪತ್ನಿ ಮಿಷಾಲ್ ಆಗ್ರಹಿಸಿದ್ದಾರೆ.
ಟೆಲ್ಅವೀವ್ ಮತ್ತು ಜೆರುಸಲೇಂನಲ್ಲಿ ಸಾವಿರಾರು ಪ್ರತಿಭಟನಾಕಾರರು ಜಾಥಾ ನಡೆಸಿ ನೆತನ್ಯಾಹು ಸರಕಾರದ ನಿಲುವನ್ನು ವಿರೋಧಿಸಿ ಘೋಷಣೆ ಕೂಗಿದರು ಎಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಕಳೆದ 11 ತಿಂಗಳಿನಿಂದ ಮುಂದುವರಿದಿರುವ ಯುದ್ಧದಲ್ಲಿ ಇಸ್ರೇಲ್ ಯಾವ ಗುರಿಯನ್ನೂ ಸಾಧಿಸಿಲ್ಲ, ಬದಲಾಗಿ ವ್ಯಾಪಕ ನಾಶ-ನಷ್ಟ ಅನುಭವಿಸಿದೆ. ಇದುವರೆಗೆ ಬಿಡುಗಡೆಯಾಗಿರುವ ಒತ್ತೆಯಾಳುಗಳಲ್ಲಿ ಹೆಚ್ಚಿನವರು ನವೆಂಬರ್ನಲ್ಲಿ ಜಾರಿಗೆ ಬಂದಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಸಂದರ್ಭ ಬಿಡುಗಡೆಗೊಂಡವರು. ಕೇವಲ 8 ಒತ್ತೆಯಾಳುಗಳನ್ನು ಮಾತ್ರ ಇದುವರೆಗೆ ಇಸ್ರೇಲ್ ಸೇನೆ ರಕ್ಷಿಸಿದೆ ಎಂದು ಟೆಲ್ಅವೀವ್ನಲ್ಲಿ ಪ್ರತಿಭಟನೆಯನ್ನು ಆಯೋಜಿಸಿದ್ದ ನೊವಾ ಬೆನ್ಬರೂಚ್ರನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.
`ಒಪ್ಪಂದಕ್ಕೆ ಸಹಿ ಹಾಕಿ, ಅವರನ್ನು ಸುರಕ್ಷಿತವಾಗಿ ಮರಳಿ ಕರೆತನ್ನಿ. ರಕ್ತಪಾತ ಕೊನೆಗೊಳ್ಳಲಿ. ನರಕದಿಂದ ಪಾರು ಮಾಡುತ್ತೀರಿ ಎಂದು ನಿಮ್ಮ ಮೇಲೆ ಇಟ್ಟಿರುವ ಅವರನ್ನು(ಒತ್ತೆಯಾಳುಗಳು) ನಿರಾಶೆಗೊಳಿಸಬೇಡಿ' ಎಂಬ ಘೋಷಣೆಗಳುಳ್ಳ ಬ್ಯಾನರ್ಗಳನ್ನು ಪ್ರದರ್ಶಿಸಲಾಯಿತು. ಮಹಿಳೆಯರ ಗುಂಪೊಂದು ರಕ್ತದ ಕಲೆಗಳಿರುವ ಕಪ್ಪು ಬಣ್ಣದ ಟಿ-ಶರ್ಟ್ ಧರಿಸಿ ಜಾಥಾದಲ್ಲಿ ಪಾಲ್ಗೊಂಡರು. ಗಾಝಾದಲ್ಲಿ ಇನ್ನೂ ಒತ್ತೆಸೆರೆಯಲ್ಲಿರುವವರ ಹೆಸರುಗಳನ್ನು ಮೈಕ್ಗಳಲ್ಲಿ ಓದಿ ಹೇಳಲಾಯಿತು.
►ನೆತನ್ಯಾಹು ರಾಜೀನಾಮೆಗೆ ವಿರೋಧ ಪಕ್ಷಗಳ ಆಗ್ರಹ
ಪಿಲಡೆಲ್ಫಿ ಕಾರಿಡಾರ್ ವಿಷಯದಲ್ಲಿ ಇಸ್ರೇಲ್ ಪ್ರಧಾನಿಯ ನಿಲುವನ್ನು ವಿರೋಧ ಪಕ್ಷಗಳು ಟೀಕಿಸಿದ್ದು ಭದ್ರತಾ ಕಾರಣಕ್ಕಾಗಿ ದಕ್ಷಿಣ ಗಾಝಾ ಗಡಿಯಲ್ಲಿ ಇಸ್ರೇಲ್ ತನ್ನ ಪಡೆಗಳನ್ನು ಇರಿಸುವ ಅಗತ್ಯವಿಲ್ಲ ಎಂದು ಹೇಳಿವೆ.
ಇಸ್ರೇಲ್ನ ಅಸ್ತಿತ್ವಕ್ಕೆ ಇರಾನ್ ಪ್ರಮುಖ ಅಪಾಯವಾಗಿದೆ. ಫಿಲಡೆಲ್ಫಿ ಕಾರಿಡಾರ್ ಅಲ್ಲ ಎಂದು ಇಸ್ರೇಲ್ನ ಮಾಜಿ ಸೇನಾಧಿಕರಿ ಮತ್ತು ಪ್ರಧಾನಿ ನೆತನ್ಯಾಹು ಅವರ ಯುದ್ಧಸಂಪುಟದ ಭಾಗವಾಗಿದ್ದ ಬೆನ್ನೀ ಗ್ರಾಂಟ್ಸ್ ಹೇಳಿದ್ದಾರೆ. ಗ್ರಾಂಟ್ಸ್ ಜೂನ್ನಲ್ಲಿ ಯುದ್ಧ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.
ಹಮಾಸ್ ಮತ್ತು ಇತರ ಫೆಲಸ್ತೀನ್ ಸಶಸ್ತ್ರ ಹೋರಾಟಗಾರರು ಗಾಝಾಕ್ಕೆ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡದಂತೆ ತಡೆಯಲು ಫಿಲಡೆಲ್ಫಿ ಕಾರಿಡಾರ್ನ ನಿಯಂತ್ರಣ ಅಗತ್ಯವಾಗಿದ್ದರೂ ಇದರ ಬಗ್ಗೆ ಪಟ್ಟು ಹಿಡಿಯದೆ ನೆತನ್ಯಾಹು ತನ್ನ ನಿಲುವನ್ನು ಸಡಿಲಿಸಬೇಕು. ಫಿಲಡೆಲ್ಫಿ ಕಾರಿಡಾರ್ ಗೆ ನಾವು ಯಾವಾಗ ಬಯಸಿದರೂ ಮರಳಬಹುದು ಎಂದು ಗ್ರಾಂಟ್ಸ್ ಹೇಳಿದ್ದಾರೆ. ಅಕ್ಟೋಬರ್ 7ರ ಬಳಿಕ ಎಲ್ಲವೂ ಬದಲಾಗಿರುವುದನ್ನು ನೆತನ್ಯಾಹು ಅರ್ಥ ಮಾಡಿಕೊಂಡಿಲ್ಲವಾದರೆ ಮತ್ತು ಫಿಲಾಡೆಲ್ಫಿ ಕಾರಿಡಾರ್ಗೆ ಮರಳುವುದಕ್ಕೆ ಎದುರಾಗುವ ಅಂತರಾಷ್ಟ್ರೀಯ ಒತ್ತಡವನ್ನು ಎದುರಿಸಲು ಅವರಿಗೆ ಸಾಧ್ಯವಿಲ್ಲದಿದ್ದರೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮನೆಗೆ ಮರಳಲಿ' ಎಂದವರು ಒತ್ತಾಯಿಸಿದ್ದು ದೇಶದಲ್ಲಿ ಹೊಸ ಚುನಾವಣೆಗೆ ಆಗ್ರಹಿಸಿದ್ದಾರೆ. ಫಿಲಾಡೆಲ್ಫಿ ಕಾರಿಡಾರ್ ಅಲ್ಲ ಅಡ್ಡಿಯಾಗಿಲ್ಲ, ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಇಚ್ಛಾಶಕ್ತಿಯ ಕೊರತೆ ನಿಜವಾದ ಅಡ್ಡಿಯಾಗಿದೆ. ಹಮಾಸ್ ನ ಭೂಗತ ಸುರಂಗಗಳನ್ನು ತಡೆಗೋಡೆಯೊಂದಿಗೆ ನಿರ್ಬಂಧಿಸುವ ಯೋಜನೆ ಇದೆ. ಆದರೆ ನೆತನ್ಯಾಹು ಈ ಬಗ್ಗೆ ರಾಜಕೀಯವಾಗಿ ಪ್ರಚಾರ ಮಾಡಿಲ್ಲ ಎಂದು ಗ್ರಾಂಟ್ಸ್ ಟೀಕಿಸಿದ್ದಾರೆ.
ಗಾಝಾ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಫಿಲಡೆಲ್ಫಿ ಕಾರಿಡಾರ್ ವಿಷಯ ಪ್ರಮುಖ ಅಡ್ಡಿಯಾಗಿದ್ದು ನೆತನ್ಯಾಹು ಅವರ ಬಿಗಿ ನಿಲುವು ಅಮೆರಿಕ ಸೇರಿದಂತೆ ಇಸ್ರೇಲ್ನ ನಿಕಟ ಮಿತ್ರ ದೇಶಗಳ ಟೀಕೆಗೂ ಗುರಿಯಾಗಿದೆ. ಜತೆಗೆ ಇಸ್ರೇಲ್ನ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಕೂಡಾ ನೆತನ್ಯಾಹು ನಿಲುವನ್ನು ವಿರೋಧಿಸುತ್ತಿದ್ದಾರೆ.