ಐಎಂಎಫ್ ನಿಂದ ಗರಿಷ್ಟ ಸಾಲ: 4ನೇ ಸ್ಥಾನಕ್ಕೇರಲಿದೆ ಪಾಕಿಸ್ತಾನ
ಏಶ್ಯಾದಲ್ಲಿ ಅಗ್ರಸ್ಥಾನ
Photo: PTI
ಇಸ್ಲಮಾಬಾದ್: ಆರ್ಥಿಕ ಮುಗ್ಗಟ್ಟಿನ ಜತೆಗೆ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನವು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ನಿಂದ 3 ಶತಕೋಟಿ ಡಾಲರ್ ಸಾಲದ ನಿರೀಕ್ಷೆಯಲ್ಲಿದ್ದು ಈ ಮೂಲಕ ಐಎಂಎಫ್ನಿಂದ ಅತೀ ಹೆಚ್ಚು ಸಾಲ ಪಡೆದ ದೇಶಗಳ ಪಟ್ಟಿಯಲ್ಲಿ ಇಕ್ವೆಡಾರ್ ದೇಶವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದೇ ವೇಳೆ, ಐಎಂಎಫ್ನಿಂದ ಗರಿಷ್ಟ ಸಾಲ ಪಡೆದ ಏಶ್ಯಾದ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ.
ಉಕ್ರೇನ್ನಲ್ಲಿನ ಯುದ್ಧ ಮತ್ತು ದೇಶೀಯ ಸವಾಲುಗಳ ಸರಣಿಯಿಂದ ನಗದು ಕೊರತೆ ಎದುರಿಸುತ್ತಿರುವ ಪಾಕಿಸ್ತಾನ ಪಾವತಿಗಳ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದೆ. ವಿದೇಶಿ ಸಾಲ ಮರುಪಾವತಿಸುವ ಒತ್ತಡಕ್ಕೆ ಸಿಲುಕಿರುವ ಪಾಕಿಸ್ತಾನ ಸುಸ್ತೀದಾರರ ಪಟ್ಟಿ(ಡಿಫಾಲ್ಟರ್ ಲಿಸ್ಟ್)ಗೆ ಸೇರ್ಪಡೆಯಾಗುವುದನ್ನು ತಪ್ಪಿಸಲು ಹರಸಾಹಸ ಪಡುತ್ತಿದೆ. ಇದೀಗ ಜಾಗತಿಕ ಸಾಲದಾತ ಐಎಂಎಫ್ನಿಂದ ಮುಂದಿನ 9 ತಿಂಗಳಾವಧಿಯಲ್ಲಿ 3 ಶತಕೋಟಿ ಡಾಲರ್ ಸಾಲ ಪಡೆಯುವ ನಿಟ್ಟಿನಲ್ಲಿ ವಿಶೇಷ ಒಪ್ಪಂದಕ್ಕೆ ಪಾಕ್ ಸರಕಾರ ಸಹಿಹಾಕಿದೆ.
1947ರಲ್ಲಿ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆದ ಬಳಿಕದ ಅತೀ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನವು 20213ರ ಮಾರ್ಚ್ 31ರ ವರದಿಯಂತೆ 7.4 ಶತಕೋಟಿ ಡಾಲರ್ ಸಾಲದೊಂದಿಗೆ ಐಎಂಎಫ್ನಿಂದ ಅತ್ಯಧಿಕ ಸಾಲ ಪಡೆದ ದೇಶಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿತ್ತು. 46 ಶತಕೋಟಿ ಡಾಲರ್ ಸಾಲದೊಂದಿಗೆ ಅರ್ಜೆಂಟೀನಾ ಅಗ್ರಸ್ಥಾನ, 18 ಶತಕೋಟಿ ಡಾಲರ್ ಸಾಲದೊಂದಿಗೆ ಈಜಿಪ್ಟ್ 2ನೇ ಸ್ಥಾನ, 12.2 ಶತಕೋಟಿ ಸಾಲದೊಂದಿಗೆ ಉಕ್ರೇನ್ 3ನೇ ಸ್ಥಾನ, 8.2 ಶತಕೋಟಿ ಡಾಲರ್ ಸಾಲದೊಂದಿಗೆ ಇಕ್ವೆಡಾರ್ 4ನೇ ಸ್ಥಾನದಲ್ಲಿತ್ತು ಎಂದು ‘ದಿ ಎಕ್ಸ್ಪ್ರೆಸ್ ಟ್ರಿಬ್ಯೂನಲ್’ ಪತ್ರಿಕೆ ವರದಿ ಮಾಡಿದೆ.
ಇದೀಗ ಐಎಂಎಫ್ನಿಂದ ಮತ್ತೆ 3 ಶತಕೋಟಿ ಡಾಲರ್ ಸಾಲ ಪಡೆಯುವ ಒಪ್ಪಂದಕ್ಕೆ ಪಾಕ್ ಸರಕಾರ ಸಹಿಹಾಕಿದೆ. ಈ ಒಪ್ಪಂದವನ್ನು ಐಎಂಎಫ್ನ ಆಡಳಿತ ಮಂಡಳಿ ಅನುಮೋದಿಸಿದರೆ ಆಗ ಪಾಕಿಸ್ತಾನವು ಐಎಂಎಫ್ನಿಂದ ಪಡೆಯುವ ಸಾಲದ ಮೊತ್ತ 10.4 ಶತಕೋಟಿ ಡಾಲರ್ಗೆ ಏರಲಿದ್ದು ಇಕ್ವೆಡಾರ್ ಅನ್ನು ಹಿಂದಿಕ್ಕಲಿದೆ. ಐಎಂಎಫ್ನಿಂದ ಒಟ್ಟು 93 ದೇಶಗಳು ಸಾಲ ಪಡೆದಿದ್ದರೂ, ಐಎಂಎಫ್ಗೆ ಬಾಕಿಯಿರುವ 155 ಶತಕೋಟಿ ಡಾಲರ್ ಸಾಲದ 71.7%ದಷ್ಟನ್ನು ಅಗ್ರ 10 ಸಾಲಗಾರ ದೇಶಗಳು ಬಾಕಿ ಇರಿಸಿಕೊಂಡಿವೆ.
ಈ ವರ್ಷದ ಮಾರ್ಚ್ 31ರವರೆಗೆ, ವಿಶ್ವದ ಆರ್ಥಿಕ ಸ್ಥಿತಿಯ ಸಮತೋಲನಕ್ಕೆ ಹಾಗೂ ದುರ್ಬಲ ಆರ್ಥಿಕತೆಗೆ ನೆರವಾಗಲು 155 ಶತಕೋಟಿ ಡಾಲರ್ ಸಾಲ ಒದಗಿಸಲಾಗಿದೆ ಎಂದು ಐಎಂಎಫ್ ಅಂಕಿಅಂಶ ಸಹಿತ ಮಾಹಿತಿ ನೀಡಿದೆ.
ಏಶ್ಯಾ ವಲಯದಲ್ಲಿ ಪಾಕ್ಗೆ ಅಗ್ರಸ್ಥಾನ
ಐಎಂಎಫ್ನಿಂದ ಅತ್ಯಧಿಕ ಸಾಲ ಪಡೆದಿರುವ ದೇಶಗಳ ಜಾಗತಿಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಲಿರುವ ಪಾಕಿಸ್ತಾನ, ಏಶ್ಯಾ ವಲಯದಲ್ಲಿ ಐಎಂಎಫ್ನಿಂದ ಸಾಲ ಪಡೆದಿರುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ವರದಿ ಹೇಳಿದೆ. ಆ ಬಳಿಕದ ಸ್ಥಾನದಲ್ಲಿ ಶ್ರೀಲಂಕಾ, ನೇಪಾಳ, ಉಜ್ಬೇಕಿಸ್ತಾನ, ಕಿರ್ಗಿರ್ ಗಣರಾಜ್ಯ, ಅರ್ಮೇನಿಯಾ ಮತ್ತು ಮಂಗೋಲಿಯಾ ದೇಶಗಳಿವೆ.