ಮೆಕ್ಸಿಕೋ: 9 ವಿದ್ಯಾರ್ಥಿಗಳ ತುಂಡರಿಸಿದ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ
ಮೆಕ್ಸಿಕೋ: ಕಳೆದ ತಿಂಗಳು ಮೆಕ್ಸಿಕೋದಲ್ಲಿ ರಜೆ ಕಳೆಯಲೆಂದು ಆಗಮಿಸಿ ನಾಪತ್ತೆಯಾಗಿದ್ದ 9 ವಿದ್ಯಾರ್ಥಿಗಳ ಮೃತದೇಹ ತುಂಡರಿಸಲ್ಪಟ್ಟ ಸ್ಥಿತಿಯಲ್ಲಿ ಸ್ಥಳೀಯ ಹೆದ್ದಾರಿಯ ಬದಿಯಲ್ಲಿ ಅನಾಥ ಸ್ಥಿತಿಯಲ್ಲಿದ್ದ ವಾಹನವೊಂದರಲ್ಲಿ ಕಂಡುಬಂದಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಸ್ಯಾನ್ ಜೋಸ್ ಮಿಯಾಹುವಟ್ಲಾನ್ ಪ್ರದೇಶದಲ್ಲಿ ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನದಲ್ಲಿ ಕಂಡುಬಂದ ಪೆಟ್ಟಿಗೆಯಲ್ಲಿ ರಕ್ತದಿಂದ ಆವೃತವಾದ ಬಟ್ಟೆಯಲ್ಲಿ ಮುಚ್ಚಿದ್ದ ಮೃತದೇಹಗಳು, ಜತೆಗೆ ಕತ್ತರಿಸಲ್ಪಟ್ಟ 8 ಜೋಡಿ ಹಸ್ತಗಳು ಕಂಡುಬಂದಿವೆ. ಮತ್ತೊಂದು ಟ್ರಂಕ್ ನಲ್ಲಿ ಕತ್ತರಿಸಲ್ಪಟ್ಟ 2 ಹಸ್ತಗಳು ಪತ್ತೆಯಾಗಿವೆ. ವರದಿಯ ಪ್ರಕಾರ, 4 ಮೃತದೇಹಗಳು ಪೆಟ್ಟಿಗೆಯಲ್ಲಿ, ಉಳಿದ 5 ಮೃತದೇಹಗಳು ವಾಹನದ ಟರ್ಪಾಲಿನಡಿಯಲ್ಲಿ ಕಂಡುಬಂದಿದೆ. ಫೆಬ್ರವರಿ 27ರಂದು ನಾಪತ್ತೆಯಾಗಿದ್ದ 19ರಿಂದ 30 ವರ್ಷದೊಳಗಿನ ನಾಲ್ವರು ಮಹಿಳೆಯರು ಹಾಗೂ ಐವರು ಪುರುಷರ ಮೃತದೇಹ ಇದಾಗಿದ್ದು ಮೃತದೇಹದ ಮೇಲೆ ಗುಂಡಿನ ಗಾಯ ಹಾಗೂ ಚಿತ್ರಹಿಂಸೆಯ ಗುರುತು ಕಂಡುಬಂದಿದೆ. ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.