ಅಧಿಕಾರಕ್ಕೆ ಬಂದ ಆರೇ ದಿನದಲ್ಲಿ ಮೆಕ್ಸಿಕೋ ಮೇಯರ್ ಹತ್ಯೆ
PC: x.com/HHunter_Global
ಮೆಕ್ಸಿಕೊ ಸಿಟಿ: ಹಿಂಸಾಪೀಡಿತ ಗುರೆರೊ ರಾಜ್ಯದ ರಾಜಧಾನಿಯ ಮೇಯರ್ ಭಾನುವಾರ ಹತ್ಯೆಗೀಡಾಗಿದ್ದು, ಅಧಿಕಾರಕ್ಕೆ ಬಂದ ಆರೇ ದಿನದಲ್ಲಿ ಇವರ ಹತ್ಯೆಯಾಗಿದೆ ಎಂದು ರಾಜ್ಯದ ಗವರ್ನರ್ ಪ್ರಕಟಿಸಿದ್ದಾರೆ.
ನೈರುತ್ಯ ಮೆಕ್ಸಿಕೋದ ಪ್ರದೇಶವಾಗಿರುವ ಸುಮಾರು 2.8 ಲಕ್ಷ ಜನಸಂಖ್ಯೆ ಹೊಂದಿರುವ ಚಿಲ್ಪಾಂಸಿಂಗೋ ನಗರದ ಮೇಯರ್ ಅಲೆಜೆಂಡ್ರೋ ಅರ್ಕೋಸ್ ಅಧಿಕಾರ ವಹಿಸಿಕೊಂಡ ಆರೇ ದಿನಗಳಲ್ಲಿ ಹತ್ಯೆಗೀಡಾಗಿದ್ದಾರೆ. ಅವರ ಅಕಾಲಿಕ ಮರಣದಿಂದ ಇಡೀ ಗುರೇರೊ ರಾಜ್ಯ ಶೋಕಪೀಡಿತವಾಗಿದೆ ಎಂದು ಗವರ್ನರ್ ಎವೆಲಿನ್ ಸಲ್ಗಡೊ ಹೇಳಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಟಾರ್ನಿ ಜನರಲ್ ಕಚೇರಿ ಹೇಳಿದೆ. ಪಿಕಪ್ ಟ್ರಕ್ ಒಂದರಲ್ಲಿ ಶಿರಚ್ಛೇದ ಮಾಡಲ್ಪಟ್ಟ ಮೇಯರ್ ಅವರ ರುಂಡದ ಫೋಟೊ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಸರ್ಕಾರ ಅಧಿಕೃತವಾಗಿ ಮೇಯರ್ ಹತ್ಯೆಯನ್ನು ದೃಢಪಡಿಸಿದೆ. ಮೂರು ದಿನಗಳ ಹಿಂದಷ್ಟೇ ನಗರ ಸರ್ಕಾರದ ಕಾರ್ಯದರ್ಶಿ ಫ್ರಾನ್ಸಿಸ್ಕೊ ತಪಿಯಾ ಗುಂಡೇಟಿಗೆ ಬಲಿಯಾಗಿದ್ದರು.
"ಅವರು ಯುವ ಹಾಗೂ ಪ್ರಾಮಾಣಿಕ ಅಧಿಕಾರಿಗಳಾಗಿದ್ದರು ಮತ್ತು ತಮ್ಮ ಸಮುದಾಯದ ಪ್ರಗತಿಗೆ ಶ್ರಮಿಸುತ್ತಿದ್ದರು" ಎಂದು ಸೆನೆಟರ್ ಅಲೆಜಂಡ್ರೊ ಮೊರೇನೊ ಜಾಲತಾಣಗಳಲ್ಲಿ ಹೇಳಿದ್ದಾರೆ. ಅರ್ಕೋಸ್ ಅವರ ಹತ್ಯೆ ಬಗ್ಗೆ ಫೆಡರಲ್ ಅಟಾರ್ನಿ ಜನರಲ್ ಕಚೇರಿ ತನಿಖೆ ನಡೆಸಬೇಕು ಎಂದು ಮೆಕ್ಸಿಕೋದ ಪಿಆರ್ ಐ ಪಕ್ಷದ ಮುಖಂಡ ಮೊರೆನೊ ಆಗ್ರಹಿಸಿದ್ದಾರೆ.