ಇಸ್ರೇಲ್ ಸೇನೆಗೆ ಎಐ ತಂತ್ರಜ್ಞಾನ ಪೂರೈಕೆ ವಿರೋಧಿಸಿ ಪ್ರತಿಭಟಿಸಿದ ಇಬ್ಬರು ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್

ವಾಶಿಂಗ್ಟನ್: ಇಸ್ರೇಲ್ ಸೇನೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು(ಎಐ) ಪೂರೈಕೆ ಮಾಡುವುದನ್ನು ವಿರೋಧಿಸಿ ಪ್ರತಿಭಟಿಸಿದ ಇಬ್ಬರು ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ವಜಾಗೊಳಿಸಿದೆ ಎಂದು ವರದಿಯಾಗಿದೆ.
ಮೈಕ್ರೋಸಾಫ್ಟ್ ಉದ್ಯೋಗಿಗಳಾದ ಇಬ್ತಿಹಾಲ್ ಅಬುಸ್ಸಾದ್ ಮತ್ತು ವನಿಯಾ ಅಗರವಾಲ್ ಅವರನ್ನು ವಜಾಗೊಳಿಸಲಾಗಿದೆ.
ಮೈಕ್ರೋಸಾಫ್ಟ್‌ನ ಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಸ್ತಾಫಾ ಸುಲೇಮಾನ್ ಅವರು ಎಐ ಉತ್ಪನ್ನದ ತಾಜಾ ವಿವರಗಳನ್ನು ಹಾಗೂ ಕಂಪೆನಿಯ ‘ಎಐ ಅಸಿಸ್ಟಾಂಟ್’ ಮಾದರಿ ಬಗ್ಗೆ ಸಂಸ್ಥೆ ಹೊಂದಿರುವ ದೀರ್ಘಾವಧಿಯ ದೃಷ್ಟಿಕೋನದ ಬಗ್ಗೆ ಮಾತನಾಡುತ್ತಿದ್ದಾಗ ಪ್ರತಿಭಟನೆ ನಡೆದಿತ್ತು.
ಮುಸ್ತಾಫಾ ಸುಲೇಮಾನ್ ಭಾಷಣ ಮಾಡುತ್ತಿದ್ದಾಗ ಮೈಕ್ರೋಸಾಫ್ಟ್ ನ ಮಹಿಳಾ ಉದ್ಯೋಗಿ ಇಬ್ತಿಹಾಲ್ ಅಬುಸ್ಸಾದ್ ಎಂಬವರು ವೇದಿಕೆಯೆಡೆಗೆ ಸಾಗಿ, ‘ಮುಸ್ತಾಫಾ ನಿಮಗೆ ನಾಚಿಕೆಯಾಗಬೇಕು ’ಎಂದು ಘೋಷಣೆ ಕೂಗಿ, ಭಾಷಣಕ್ಕೆ ಅಡ್ಡಿಪಡಿಸಿದರು. ‘‘ಕೃತಕ ಬುದ್ಧಿಮತ್ತೆಯನ್ನು ಮಾನವಕುಲದ ಒಳಿತಿಗೆ ಬಳಸಲಾಗುವುದು ಎಂದು ನೀವು ಹೇಳುತ್ತಿದ್ದೀರಿ. ಆದರೆ ಮೈಕ್ರೋಸಾಫ್ಟ್ ಎಐ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಸೇನೆಗೆ ಮಾರಾಟ ಮಾಡುತ್ತಿದೆ. ನಮ್ಮ ಪ್ರಾಂತದಲ್ಲಿ (ಗಾಝಾ) 50 ಸಾವಿರಕ್ಕೂ ಅಧಿಕ ಜನರನ್ನು ಹತ್ಯೆಗೈಯಲಾಗಿದೆ. ಈ ನರಮೇಧಕ್ಕೆ ಎಐ ಶಕ್ತಿ ತುಂಬುತ್ತಿದೆ ಎಂದು ಆಪಾದಿಸಿದ್ದರು.