ರಷ್ಯಾದ ರೊಸ್ತೊವ್ ನಗರದ ಮಿಲಿಟರಿ ನೆಲೆಗಳು ವಾಗ್ನರ್ ವಶ?
Photo: PTI
ಮಾಸ್ಕೋ : ರಷ್ಯಾ ಸೇನೆಯ ನಾಯಕತ್ವ ಕೊನೆಗೊಳಿಸಲು ಹೋರಾಡುತ್ತಿರುವುದಾಗಿ ಹೇಳಿಕೊಂಡಿರುವ ವ್ಯಾಗ್ನರ್ ಮೆರ್ಸಿನರಿ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ತಾವು ರಷ್ಯಾದ ರೊಸ್ತೊವ್-ಆನ್-ಡಾನ್ ನಲ್ಲಿರುವ ಸೇನಾ ಮುಖ್ಯ ಕಾರ್ಯಾಲಯದಲ್ಲಿರುವುದಾಗಿ ಇಂದು ಹೇಳಿಕೊಂಡಿದ್ದಾರೆ.
ತಮ್ಮ ಹೋರಾಟಗಾರರು ರೊಸ್ತೊವ್-ಆನ್-ಡಾನ್ ನಗರದ ಎಲ್ಲಾ ಮಿಲಿಟರಿ ನೆಲೆಗಳನ್ನು, ವಾಯು ನೆಲೆಯನ್ನು ನಿಯಂತ್ರಣ ತೆಗೆದುಕೊಂಡಿದ್ದಾರೆ ಎಂದೂ ಅವರು ಹೇಳಿಕೊಂಡಿದ್ದಾರೆ.
ವ್ಯಾಗ್ನರ್ ಪಡೆಗಳು ರೊಸ್ತೊವ್ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆಂಬ ಸುದ್ದಿಗಳ ಬೆನ್ನಲ್ಲೇ ಅಲ್ಲಿನ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಮಿಲಿಟರಿ ವಾಹನಗಳು ಹಾರುತ್ತಿರುವುದು ಹಾಗೂ ಸೇನಾ ವಾಹನಗಳು ರಸ್ತೆಗಳಲ್ಲಿರುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರಷ್ಯನ್ ಗಾರ್ಡ್ ಗಳು ಮತ್ತು ಮಿಲಿಟರಿ ಪೊಲೀಸರು ವ್ಯಾಗ್ನರ್ ಗುಂಪಿಗೆ ಸೇರುತ್ತಿದ್ದಾರೆ ಎಂದೂ ಆಡಿಯೋ ರೆಕಾರ್ಡಿಂಗ್ನಲ್ಲಿ ಹೇಳಿಕೊಂಡಿದ್ದಾರೆ.ರಷ್ಯಾದ ಮಿಲಿಟರಿಯ 60ರಿಂದ 70 ಸೈನಿಕರು ತಮ್ಮ ಜೊತೆ ಸೇರಿಕೊಂಡಿದ್ದಾರೆಂದೂ ಅವರು ಹೇಳಿದ್ದಾರೆ.
ರಷ್ಯಾದ ಸ್ಥಳೀಯ ರೊಸ್ತೊವ್-ಆನ್-ಡಾನ್ ಟೆಲಿಗ್ರಾಮ್ ಚಾನಲ್ನ ಕೆಲ ವೀಡಿಯೋಗಳಲ್ಲಿ ನಗರದ ಪ್ರಾದೇಶಿಕ ಪೊಲೀಸ್ ಮುಖ್ಯ ಕಾರ್ಯಾಲಯದಲ್ಲಿ ಸಮವಸ್ತ್ರಧಾರಿ ಸಶಸ್ತ್ರ ವ್ಯಕ್ತಿಗಳಿರುವುದು ಕಾಣಿಸುತ್ತಿದೆ. ಆದರೆ ಆ ಸಶಸ್ತ್ರಧಾರಿಗಳು ಯಾರೆಂದು ದೃಢಪಟ್ಟಿಲ್ಲ.
ಸೇನೆಯ ನಾಯಕತ್ವವನ್ನು ತಮ್ಮದಾಗಿಸಲು ತಮ್ಮ ಪಡೆಗಳು 1200 ಕಿಮೀ ದೂರವಿರುವ ಮಾಸ್ಕೋದತ್ತ ಪಯಣಿಸಿವೆ ಎಂದೂ ಯೆವ್ ಗನಿ ಹೇಳಿದ್ದಾರೆ.
ಉಕ್ರೇನ್ ಗಡಿ ಭಾಗದಲ್ಲಿರುವ ರಷ್ಯಾದ ದಕ್ಷಿಣ ಭಾಗ ಹಾಗೂ ಮಾಸ್ಕೋ ನಡುವೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಮಿಲಿಟರಿ ಪಡೆ ಸಾಗುತ್ತಿರುವ ಬಗ್ಗೆ ರಷ್ಯಾದ ಅಧಿಕಾರಿಗಳು ಹೇಳಿದ್ದು ಇವುಗಳಿಂದ ದೂರವುಳಿಯುವಮತೆ ಜನರಿಗೆ ಸೂಚಿಸಿದ್ದಾರೆ.