ಉಕ್ರೇನ್ಗೆ 125 ದಶಲಕ್ಷ ಡಾಲರ್ ಮಿಲಿಟರಿ ನೆರವು : ಅಮೆರಿಕ ಘೋಷಣೆ
ಸಾಂದರ್ಭಿಕ ಚಿತ್ರ
ವಾಶಿಂಗ್ಟನ್ : ರಶ್ಯದ ಕುರ್ಸುಕ್ ಪ್ರಾಂತದ ಒಳಗೆ ಉಕ್ರೇನ್ ಪಡೆಗಳು ನುಗ್ಗಿರುವ ವರದಿಯ ನಡುವೆಯೇ ಉಕ್ರೇನ್ಗೆ ಹೊಸದಾಗಿ 125 ದಶಲಕ್ಷ ಡಾಲರ್ ಮಿಲಿಟರಿ ನೆರವು ಒದಗಿಸುವುದಾಗಿ ಅಮೆರಿಕ ಘೋಷಿಸಿದೆ.
ರಶ್ಯದ ಆಕ್ರಮಣವನ್ನು ಹಿಮ್ಮೆಟ್ಟಿಸುತ್ತಿರುವ ಉಕ್ರೇನ್ ಸೇನೆಗೆ ನಮ್ಮ ಬೆಂಬಲದ ಬದ್ಧತೆಯನ್ನು ಈ ನೆರವು ಪ್ಯಾಕೇಜ್ ಪುನರುಚ್ಚರಿಸಿದೆ. ನಮ್ಮ ಉಕ್ರೇನಿಯನ್ ಮಿತ್ರರೊಂದಿಗೆ ಅಮೆರಿಕ ನಿರಂತರ ಸಂಪರ್ಕದಲ್ಲಿದ್ದು ಅವರು ಏನು ಮಾಡುತ್ತಿದ್ದಾರೆ, ಅವರ ಉದ್ದೇಶವೇನು, ಕಾರ್ಯತಂತ್ರವೇನು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದೇವೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಮಿತಿ ವಕ್ತಾರ ಜಾನ್ ಕಿರ್ಬಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ನೆರವಿನ ಪ್ಯಾಕೇಜ್ ವಾಯು ರಕ್ಷಣಾ ಪ್ರತಿಬಂಧಕಗಳು, ರಾಕೆಟ್ ವ್ಯವಸ್ಥೆಗಳು, ಫಿರಂಗಿಗಳಿಗೆ ಯುದ್ಧ ಸಾಮಾಗ್ರಿಗಳು, ಬಹೂಪಯೋಗಿ ರೇಡಾರ್ ಗಳು ಹಾಗೂ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.
ಉಕ್ರೇನ್ ವಿರುದ್ಧದ 2022ರ ಫೆಬ್ರವರಿಯಲ್ಲಿ ರಶ್ಯ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸಿದಂದಿನಿಂದ ಅಮೆರಿಕವು ಉಕ್ರೇನ್ಗೆ ಮಿಲಿಟರಿ ನೆರವು ಒದಗಿಸುವ ಪ್ರಮುಖ ದೇಶವಾಗಿದ್ದು ಇದುವರೆಗೆ 55 ಶತಕೋಟಿ ಡಾಲರ್ ಗೂ ಅಧಿಕ ಮೊತ್ತದ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ.