ಅಮೆರಿಕದಲ್ಲಿ ಅಕ್ರಮ ವಲಸಿಗರ ಜತೆ ದುರ್ವರ್ತನೆ: ಭಾರತ ಪ್ರತಿಭಟನೆ

ಸಾಂದರ್ಭಿಕ ಚಿತ್ರ x.com/RosTox
ಹೊಸದಿಲ್ಲಿ: ಭಾರತಕ್ಕೆ ಗಡಿಪಾರುಗೊಂಡ ಅಕ್ರಮ ವಲಸಿಗರಿಗೆ ಕೈಕೋಳ ತೊಡಿಸಿ ಕಾಲಿಗೆ ಸರಪಣಿ ಬಿಗಿದು ಅಮೆರಿಕದ ಸ್ಯಾನ್ ಆಂಟೋನಿಯಾದಿಂದ ಸೇನಾ ವಿಮಾನದಲ್ಲಿ ಫೆಬ್ರುವರಿ 5ರಂದು ಭಾರತಕ್ಕೆ ಕರೆತಂದ ಅಮೆರಿಕ ರೀತಿಯನ್ನು ಭಾರತ ಪ್ರತಿಭಟಿಸಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಈ ತಿಂಗಳ 12 ಹಾಗೂ 13ರಂದು ವಾಷಿಂಗ್ಟನ್ ಗೆ ಅಧಿಕೃತ ಭೇಟಿ ನೀಡುವುದನ್ನು ಭಾರತ ದೃಢಪಡಿಸಿದೆ.
ಈಗಾಗಲೇ ಅಕ್ರಮ ವಲಸಿಗರೆಂದು ದೃಢೀಕರಣಗೊಂಡಿರುವ 96 ಮಂದಿಯನ್ನು ಶೀಘ್ರವೇ ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಅರಂಭವಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ. ಭಾರತ ಪ್ರತಿಭಟನೆ ಸಲ್ಲಿಸಿರುವ ಹೊರತಾಗಿಯೂ, ಟ್ರಂಪ್- ಮೋದಿ ನಡುವಿನ ದ್ವಿಪಕ್ಷೀಯ ಮಾತುಕತೆ ವೇಳೆ ಗಡಿಪಾರುಗೊಂಡ ಭಾರತೀಯರ ಜತೆಗೆ ದುರ್ವರ್ತನೆ ತೋರಿರುವ ಕ್ರಮವನ್ನು ಸ್ವತಃ ಮೋದಿ ಆಕ್ಷೇಪಿಸುವ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ.
"ದುರ್ವರ್ತನೆ ಬಗ್ಗೆ ನಮ್ಮ ಕಳವಳವನ್ನು ನಾವು ಅಮೆರಿಕದ ಮುಂದೆ ವ್ಯಕ್ತಪಡಿಸಿದ್ದೇವೆ" ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ. ಬ್ರೆಝಿಲ್ ಮಾದರಿಯಲ್ಲಿ ಭಾರತ ಕೂಡಾ ತನ್ನ ನಾಗರಿಕರನ್ನು ಅವಮಾನಕರವಾಗಿ ನಡೆಸಿಕೊಂಡ ಅಮೆರಿಕ ಕ್ರಮದ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಿದೆಯೇ ಎಂದು ಕೇಳಿದ ಪ್ರಶ್ನೆಗೆ ಮಿಸ್ರಿ ಮೇಲಿನಂತೆ ಉತ್ತರಿಸಿದರು.
ಅಮೃತಸರಕ್ಕೆ ಇತ್ತೀಚೆಗೆ ಗಡಿಪಾರು ಮಾಡಿದ ಕ್ರಮದ ಬಗ್ಗೆ ಉಲ್ಲೇಖಿಸಿದ ಮಿಸ್ರಿ, ಈ ಹಿಂದೆ ಇಂಥ ಗಡಿಪಾರುಗಳು ನಡೆದಾಗ ಭಾರತೀಯ ನಾಗರಿಕರನ್ನು ನಡೆಸಿಕೊಂಡ ರೀತಿ ಹಾಗೂ ಟ್ರಂಪ್ ಆಡಳಿತ ನಡೆಸಿಕೊಂಡ ರೀತಿ ಸ್ವಲ್ಪ ಭಿನ್ನ ಸ್ವರೂಪದ್ದು. ಏಕೆಂದರೆ ಟ್ರಂಪ್ ಆಡಳಿತ ಈ ಗಡೀಪಾರನ್ನು ರಾಷ್ಟ್ರೀಯ ಭದ್ರತೆಯ ಕಾರ್ಯಾಚರಣೆಯಾಗಿ ಪರಿಗಣಿಸಿದೆ. ಬಹುಶಃ ಈ ಕಾರಣಕ್ಕೆ ಮಿಲಿಟರಿ ವಿಮಾನವನ್ನು ಬಳಸಲಾಗಿದೆ ಎಂದು ವಿಶ್ಲೇಷಿಸಿದರು.
ಸದ್ಯಕ್ಕೆ ಒಟ್ಟು 487 ಮಂದಿ ಭಾರತೀಯ ನಾಗರಿಕರು ಅಂತಿಮವಾಗಿ ಅಮೆರಿಕದಿಂದ ಗಡೀಪಾರಾಗುವ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ ಎಂದು ಅವರು ಬಹಿರಂಗಪಡಿಸಿದರು. ಈ ಬಗ್ಗೆ ಭಾರತೀಯ ಅಧಿಕಾರಿಗಳು 295 ಮಂದಿಯ ಗುರುತನ್ನು ದೃಢಪಡಿಸಿದ್ದಾರೆ ಎಂದು ಟ್ರಂಪ್ ಆಡಳಿತ ಮಾಹಿತಿ ಬಿಡುಗಡೆ ಮಾಡಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28