ಫೆಲೆಸ್ತೀನ್ ಪರ ಪ್ರಬಂಧ ಬರೆದ ಭಾರತ ಮೂಲದ ವಿದ್ಯಾರ್ಥಿಯನ್ನು ಅಮಾನತು ಮಾಡಿದ ಎಂಐಟಿ; ವ್ಯಾಪಕ ಆಕ್ರೋಶ
ನ್ಯೂಯಾರ್ಕ್: ಪ್ರತಿಷ್ಠಿತ ಮೆಸೆಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವಿದ್ಯಾರ್ಥಿ ಪ್ರಹ್ಲಾದ ಅಯ್ಯಂಗಾರ್ ಎಂಬವರನ್ನು ಫೆಲೆಸ್ತೀನ್ ಪರ ಪ್ರಬಂಧ ಬರೆದ ಕಾರಣಕ್ಕೆ ಅಮಾನತು ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇವರು ಪಿಎಚ್‍ಡಿ ವಿದ್ಯಾರ್ಥಿಯಾಗಿದ್ದರು. ಆದರೆ ಈ ಅಮಾನತಿನೊಂದಿಗೆ ಐದು ವರ್ಷ ಅವಧಿಯ ನ್ಯಾಷನಲ್ ಸೈನ್ಸ್ ಫೌಂಡೇಷನ್ ಗ್ರಾಜ್ಯುಯೇಟ್ ರೀಸರ್ಚ್ ಫೆಲೋಶಿಪ್ ಕೂಡಾ ರದ್ದಾಗಲಿದೆ.
ಕಳೆದ ತಿಂಗಳು ಕಾಲೇಜಿನ ಮ್ಯಾಗಝಿನ್‍ನಲ್ಲಿ ಫೆಲೆಸ್ತೀನ್ ಪರ ಪ್ರಬಂಧವನ್ನು ಪ್ರಕಟಿಸಿದ ಕಾರಣಕ್ಕೆ ಕ್ಯಾಂಪಸ್ ಪ್ರವೇಶಿಸದಂತೆ ಭಾರತ ಮೂಲದ ವಿದ್ಯಾರ್ಥಿ ಅಯ್ಯಂಗಾರ್ ಅವರನ್ನು ಎಂಐಟಿ ನಿಷೇಧಿಸಿದೆ. ಇದು ಹಿಂಸೆಗೆ ನೀಡಿದ ಕರೆ ಎನ್ನುವುದು ಎಂಐಟಿ ಆರೋಪ. ಈ ಲೇಖನ ಪ್ರಕಟಿಸಿದ ನಿಯತಕಾಲಿಕವನ್ನು ಕೂಡಾ ನಿಷೇಧಿಸಲಾಗಿದೆ.
'ಆನ್ ಪೆಸಿಫಿಸಮ್' ಎಂಬ ಪ್ರಬಂಧ ನೇರವಾಗಿ ಹಿಂಸಾತ್ಮಕ ಪ್ರತಿರೋಧಕ್ಕೆ ಕರೆ ನೀಡಿಲ್ಲವಾದರೂ, ಫೆಸಿಫಿಸ್ಟ್ ತಂತ್ರಗಳು ಫೆಲೆಸ್ತೀನ್ ಗೆ ಆಸರೆಯಲ್ಲ ಎಂದು ಬಣ್ಣಿಸಲಾಗಿದೆ.
ಈ ಲೇಖನದಲ್ಲಿ ʼಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಫೆಲೆಸ್ತೀನ್ʼ ನ ಲೋಗೋ ಬಳಸಿಕೊಳ್ಳಲಾಗಿದೆ ಎನ್ನುವುದು ಅಮೆರಿಕ ರಕ್ಷಣಾ ಇಲಾಖೆಯ ಆರೋಪ. ಆದರೆ ತಮ್ಮ ಮೇಲೆ ಹೊರಿಸಿರುವ ಆರೋಪಗಳು ಫೋಟೋಗೆ ಸಂಬಂಧಿಸಿದ್ದಾಗಿವೆ. ಆ ಚಿತ್ರವನ್ನು ನಾನು ಕೊಟ್ಟಿಲ್ಲ ಎನ್ನುವುದು ಅಯ್ಯಂಗಾರ್ ಅವರ ವಾದ.
ಅಮೆರಿಕದ ಕ್ಯಾಂಪಸ್‍ಗಳಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲ ಎಂದು ಹಲವು ಬಾರಿ ಅಯ್ಯಂಗಾರ್ ದನಿ ಎತ್ತಿದ್ದರು. ಕಳೆದ ವರ್ಷ ಫೆಲೆಸ್ತೀನ್ ಪರ ಚಳವಳಿಯಲ್ಲೂ ಅವರು ಭಾಗವಹಿಸಿದ್ದರು.
ಅಯ್ಯಂಗಾರ್ ಅಮಾನತು ನಿರ್ಧಾರವನ್ನು ಎಂಐಟಿ ವರ್ಣಬೇಧ ನೀತಿ ವಿರುದ್ಧದ ಒಕ್ಕೂಟ ಬಲವಾಗಿ ಖಂಡಿಸಿದೆ. ಅಯ್ಯಂಗಾರ್ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಕುಲಪತಿಗಳಿಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಸಂಘಟನೆ ಹೇಳಿದೆ.