ನ್ಯಾಯ ಸಮ್ಮತ ವ್ಯಾಪಾರದ ಕುರಿತು ಮೋದಿ- ಟ್ರಂಪ್ ಮಾತುಕತೆ

PC: x.com/htTweets
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಸೋಮವಾರ ಮಾತುಕತೆ ನಡೆಸಿದ್ದು, ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಭದ್ರತೆಗೆ ಶ್ರಮಿಸುವ ಬದ್ಧತೆಯ ಭರವಸೆ ನೀಡಿದ್ದಾರೆ. ಭಾರತ ಮತ್ತು ಇತರೆಡೆಗಳಿಂದ ಆಮದಾಗುವ ವಸ್ತುಗಳ ಮೇಲೆ ಸುಂಕ ವಿಧಿಸುವ ಟ್ರಂಪ್ ಬೆದರಿಕೆ ಹಿನ್ನೆಲೆಯಲ್ಲಿ ಮತ್ತು ಅಕ್ರಮ ವಲಸಿಗರ ವಿಚಾರದ ಸಂಘರ್ಷದಿಂದ ಸೃಷ್ಟಿಯಾಗಿರುವ ಆತಂಕದ ನಡುವೆ ಈ ಮಾತುಕತೆ ವಿಶೇಷ ಮಹತ್ವ ಪಡೆದಿದೆ. ಪರಸ್ಪರ ಪ್ರಯೋಜನಕಾರಿ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಗೆ ಉಭಯ ದೇಶಗಳು ಬದ್ಧ ಎಂದು ಮೋದಿ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಟ್ರಂಪ್ ಜನವರಿ 20ರಂದು ಅಧಿಕಾರಕ್ಕೆ ಬಂದ ಬಳಿಕ ಅವರ ಜತೆ ಮೋದಿ ನಡೆಸಿದ ಮೊದಲ ಮಾತುಕತೆ ಇದಾಗಿದೆ. ರಕ್ಷಣೆ, ತಂತ್ರಜ್ಞಾನ, ಭಯೋತ್ಪಾದನೆ ನಿಗ್ರಹ, ಇಂಧನ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆ ಇದ್ದರೂ, ಟ್ರಂಪ್ ಅವರ ವಿಚ್ಛಿದ್ರಕಾರಿ ವ್ಯಾಪಾರ ನೀತಿಗಳು ಮತ್ತು ಸಾಮೂಹಿಕ ಗಡೀಪಾರು ಬೆದರಿಕೆಗಳು ಆತಂಕಕ್ಕೆ ಕಾರಣವಾಗಿವೆ.
ಈ ಮಾತುಕತೆ ವೇಳೆ ಅಮೆರಿಕ ನಿರ್ಮಿತ ಭದ್ರತಾ ಸಾಧನಗಳನ್ನು ಭಾರತ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಮಹತ್ವವನ್ನು ಟ್ರಂಪ್ ಒತ್ತಿ ಹೇಳಿದರು. ಜತೆಗೆ ನ್ಯಾಯಸಮ್ಮತ ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ಮುಂದುವರಿಸುವ ಬಗ್ಗೆಯೂ ಚರ್ಚೆ ನಡೆಸಿದರು ಎಂದು ಶ್ವೇತಭವನ ಪ್ರಕಟಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶ್ವೇತಭವನಕ್ಕೆ ಭೇಟಿ ನೀಡುವ ಸಂಬಂಧ ಮತ್ತು ಸ್ನೇಹಸಂಬಂಧ ಮತ್ತು ತಂತ್ರಗಾರಿಕೆಯ ಸಂಬಂಧಗಳನ್ನು ಬಲಪಡಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಶ್ವೇತಭವನದ ಪ್ರಕಟಣೆ ಹೇಳಿದೆ.
"ಆತ್ಮೀಯ ಟ್ರಂಪ್ ಜತೆಗೆ ಮಾತನಾಡಿರುವುದು ಅತೀವ ಸಂತಸ ತಂದಿದೆ. ಐತಿಹಾಸಿಕ ಎರಡನೇ ಅವಧಿಗಾಗಿ ಅವರನ್ನು ಅಭಿನಂದಿಸಿದ್ದೇನೆ. ಪರಸ್ಪರ ಪ್ರಯೋಜನಕಾರಿ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಗೆ ನಾವು ಬದ್ಧರಿದ್ದೇವೆ. ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಭದ್ರತೆ ಸೇರಿ ನಮ್ಮ ಜನರ ಕಲ್ಯಾಣದ ನಿಟ್ಟಿನಲ್ಲಿ ಶ್ರಮಿಸಲಿದ್ದೇವೆ" ಎಂದು ಎಕ್ಸ್ ಪೋಸ್ಟ್ ನಲ್ಲಿ ಮೋದಿ ವಿವರಿಸಿದ್ದಾರೆ.