ಮೋದಿ ಅಮೆರಿಕ ಪ್ರವಾಸ ಮುಕ್ತಾಯ | ಟ್ರಂಪ್ರ ರ್ಯಾಲಿಯಲ್ಲಿ ‘ಪಾಲ್ಗೊಳ್ಳದ’ ಪ್ರಧಾನಿ
ನರೇಂದ್ರ ಮೋದಿ , ಡೊನಾಲ್ಡ್ ಟ್ರಂಪ್ | PTI
ವಾಶಿಂಗ್ಟನ್ : ತನ್ನ ಮೂರು ದಿನಗಳ ಅಧಿಕೃತ ಅಮೆರಿಕ ಪ್ರವಾಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕೊನೆಗೊಳಿಸಿದ್ದು, ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾದ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗದೆಯೇ ಸ್ವದೇಶಕ್ಕೆ ಮರಳಿದ್ದಾರೆ. ಮೋದಿ ಅವರು ತನ್ನ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಟ್ರಂಪ್ ಕಳೆದ ವಾರ ಮಿಶಿಗನ್ನ ಫ್ಲಿಂಟ್ನಲ್ಲಿ ನಡೆದ ಸಭೆಯೊಂದರಲ್ಲಿ ಪ್ರಕಟಿಸಿದ್ದರು.
ರವಿವಾರ ಲಾಂಗ್ ಐಲ್ಯಾಂಡ್ನಲ್ಲಿ ನಡೆಯಲಿದ್ದ ಟ್ರಂಪ್ ಅವರ ರ್ಯಾಲಿಯಲ್ಲಿ ಮೋದಿ ಪಾಲ್ಗೊಳ್ಳುವ ನಿರೀಕ್ಷೆಯಿತ್ತೆಂದು ಫಾಕ್ಸ್ ಸುದ್ದಿಸಂಸ್ಥೆ ವರದಿ ಮಾಡಿತ್ತು. ಆದರೆ ಪ್ರಧಾನಿ ಅಮೆರಿಕದಲ್ಲಿ ಅಂತಹ ಯಾವುದೇ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯನ್ನು ಭಾರತವು ತಳ್ಳಿಹಾಕಿತ್ತು. ಅಮೆರಿಕದ ಮಾಜಿ ಅಧ್ಯಕ್ಷರೂ ಆದ ಟ್ರಂಪ್ ಜೊತೆ ಯಾವುದೇ ನಿರ್ದಿಷ್ಟ ಮಾತುಕತೆಯನ್ನು ಹಮ್ಮಿಕೊಳ್ಳಲಾಗಿಲ್ಲವೆಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ವಿಲ್ಮಿಂಗ್ಟನ್ನಲ್ಲಿ ನಡೆದ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಲಾಂಗ್ ಐಲ್ಯಾಂಡ್ನಲ್ಲಿ ಭಾರತೀಯ ಅಮೆರಿಕನ್ ಸಮುದಾಯದ ಸಾವಿರಾರು ಮಂದಿಯನ್ನು ಭೇಟಿಯಾಗಿದ್ದರು. ಅಲ್ಲದೆ ಅಮೆರಿಕದ ತಂತ್ರಜ್ಞಾನ ಉದ್ಯಮ ದಿಗ್ಗಜರೊಂದಿಗೂ ಮಾತುಕತೆ ನಡೆಸಿದ್ದರು. ಸೋಮವಾರ ವಿಶ್ವಸಂಸ್ಥೆಯ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದ್ದರು. ತನ್ನ ಮೂರುದಿನಗಳ ಅಮೆರಿಕ ವಾಸ್ತವ್ಯದ ಅವಧಿಯಲ್ಲಿ ಅವರು ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದರು.
ಆದರೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳಾದ ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿಲ್ಲ. ಟ್ರಂಪ್ ಅವರು ತನ್ನ ಅದ್ಭುತ ಗೆಳೆಯ ನರೇಂದ್ರ ಮೋದಿ ಅವರು ತನ್ನನ್ನು ಭೇಟಿಯಾಗಲು ಅಮೆರಿಕಕ್ಕೆ ಆಗಮಿಸುತ್ತಿದ್ದಾರೆಂದು ಚುನಾವಣಾ ಪ್ರಚಾರ ರ್ಯಾಲಿಯೊಂದರಲ್ಲಿ ಘೋಷಿಸಿದ ಕೆಲವೇ ದಿನಗಳ ಬಳಿಕ ಈ ಬೆಳವಣಿಗೆಯಾಗಿದೆ.