ಗಾಝಾ ಬೆಂಬಲಕ್ಕೆ ನಿಂತ ʼಮನಿ ಹೈಸ್ಟ್ʼ ನಟಿ ಆಲ್ಬಾ ಫ್ಲೋರ್ಸ್
ಫೆಲೆಸ್ತೀನ್ ಜನರನ್ನು ಬೆಂಬಲಿಸುವ ಸಲುವಾಗಿ ತನ್ನ ಉಡುಪಿನ ಬ್ಯಾಡ್ಜ್ ಧರಿಸಿದ ನಟಿ
ಆಲ್ಬಾ ಫ್ಲೋರ್ಸ್ | Photo: siasat.com
ಮ್ಯಾಡ್ರಿಡ್ (ಸ್ಪೇನ್) : ಸ್ಪೇನ್ನ ನಟಿ ಆಲ್ಬಾ ಫ್ಲೋರ್ಸ್ ಅವರು ಫೆ.10 ರ ಶನಿವಾರದಂದು ಸ್ಪೇನ್ ನ ವಲ್ಲಾಡೋಲಿಡ್ನಲ್ಲಿ ನಡೆದ ಗೋಯಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಫೆಲೆಸ್ತೀನ್ ಬೆಂಬಲ ಸೂಚಿಸಿ, ಗಾಝಾದಲ್ಲಿ ಶಾಂತಿಗಾಗಿ ಕರೆ ನೀಡಿದರು.
"ಮನಿ ಹೈಸ್ಟ್" ಎಂಬ ಜನಪ್ರಿಯ ಶೋನಲ್ಲಿ "ನೈರೋಬಿ" ಪಾತ್ರಕ್ಕೆ ಹೆಸರುವಾಸಿಯಾದ ಫ್ಲೋರ್ಸ್, ಫೆಲೆಸ್ತೀನಿನ ಜನರನ್ನು ಬೆಂಬಲಿಸಲು ತನ್ನ ಉಡುಪಿನ ಮೇಲೆ ಬ್ಯಾಡ್ಜ್ ಅನ್ನು ಧರಿಸಿದ್ದರು. ಅದರಲ್ಲಿ "ಶಸ್ತ್ರಾಸ್ತ್ರ ವ್ಯಾಪಾರವನ್ನು ನಿಲ್ಲಿಸಿ, ಗಾಝಾದ ಮೇಲಿನ ದಾಳಿ ನಿಲ್ಲಿಸಿ” ಎಂದು ಬರೆಯಲಾಗಿದೆ.
ಕೆಂಪು ಹಾಸಿನ ಮೇಲಿನ ಸಂದರ್ಶನದಲ್ಲಿ, ಅವರು ಅ. 7, 2023 ರಿಂದ ಬಾಂಬ್ ದಾಳಿಗೆ ಒಳಗಾಗಿರುವ ಗಾಝಾಗೆ ತನ್ನ ಸಂಪೂರ್ಣ ಬೆಂಬಲ ಸೂಚಿಸಿದರು. "ನನಗೆ ಮಾತನಾಡಲು ಅವಕಾಶವಿದೆ ಎಂದು ತಿಳಿದಿರಲಿಲ್ಲ. ನನಗೆ ಇದು ಕರಾಳ ಸಮಯ. ಏಕೆಂದರೆ ಗಾಝಾದಲ್ಲಿ ಈಗಾಗಲೇ ಸುಮಾರು 29,000 ಜನರು ಕೊಲ್ಲಲ್ಪಟ್ಟಿದ್ದಾರೆ” ಎಂದರು.
“ಫೆಲೆಸ್ತೀನ್ನಲ್ಲಿ ಏನಾಗುತ್ತಿದೆ ಎಂಬುದನ್ನು ನೆನಪಿಟ್ಟುಕೊಳ್ಳದೆ ಬಂದು ಸಂತಸದ ಕ್ಷಣದಲ್ಲಿ ಪಾಲ್ಗೊಳ್ಳುವುದು ನನಗೆ ಕಷ್ಟ. ಆದ್ದರಿಂದ ನಾನು ಬೆಂಬಲ ಸೂಚಿಸುವ ಕನಿಷ್ಠ ಬ್ಯಾಡ್ಜ್ ಧರಿಸಿದ್ದೇನೆ. ಇದು ಅದಕ್ಕೆ ಸ್ಥಳವಲ್ಲ ಎಂದು ನನಗೆ ತಿಳಿದಿದೆ. ಈ ದೇಶದ (ಸ್ಪೇನ್) ಸರಕಾರವು ಯುದ್ಧವನ್ನು ನಿಲ್ಲಿಸಲು ಕ್ರಮ ಕೈಗೊಳ್ಳುತ್ತದೆ ಎಂದು ಭಾವಿಸುತ್ತೇನೆ” ಎಂದು ಆಶಾವಾದ ವ್ಯಕ್ತಪಡಿಸಿದರು.
"ನಿಜವಾಗಿ ಗಾಝಾದಲ್ಲಿ ಏನಾಗುತ್ತಿದೆ ಎಂಬುದನ್ನು ಹೇಳಲು ಪ್ರಯತ್ನಿಸುತ್ತಿರುವ ಹೆಚ್ಚಿನ ಜನರು ಇದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ನರಮೇಧ ಕೊನೆಗೊಳ್ಳುತ್ತದೆ ಎಂಬ ಆಶಾವಾದವಿದೆ. ನಾವು ಶೀಘ್ರದಲ್ಲೇ ಯುದ್ದ ಮುಕ್ತ ಫೆಲೆಸ್ತೀನ್ ಹೊಂದುತ್ತೇವೆ ಎಂದು ನಾನು ಭಾವಿಸುತ್ತೇನೆ” ಎಂದರು.
ಫ್ಲೋರ್ಸ್ ಅವರಿಗೆ ಅತ್ಯುತ್ತಮ ಗೀತೆಗಾಗಿ ಗೋಯಾ ಪ್ರಶಸ್ತಿಯನ್ನು ನೀಡಿದಾಗ, ಪ್ರೇಕ್ಷಕರಿಗೆ "ಗುಡ್ನೈಟ್ ಮತ್ತು ಫೆಲೆಸ್ತೀನ್ ನಲ್ಲಿ ಶಾಂತಿ ನೆಲೆಸಲಿ" ಎಂಬ ಸಂದೇಶವನ್ನು ನೀಡಿದರು.
ಸಮಾರಂಭದಲ್ಲಿ, ಹಲವಾರು ಸ್ಪೇನ್ ನ ಕಲಾವಿದರು ಮತ್ತು ನಟರು ಗಾಝಾ ಪಟ್ಟಿಯಲ್ಲಿ ಫೆಲೆಸ್ತೀನಿಯನ್ನರ ವಿರುದ್ಧ ಇಸ್ರೇಲಿ ನರಮೇಧವನ್ನು ಕೊನೆಗೊಳಿಸುವಂತೆ ಕರೆ ನೀಡಿದರು.