ಉಕ್ರೇನ್ ಯುದ್ಧದಲ್ಲಿ 100ಕ್ಕೂ ಹೆಚ್ಚು ಉತ್ತರ ಕೊರಿಯಾ ಯೋಧರ ಸಾವು: ವರದಿ
ಸಾಂದರ್ಭಿಕ ಚಿತ್ರ | PC : PTI
ಸಿಯೋಲ್: ಉಕ್ರೇನ್ ವಿರುದ್ಧ ರಶ್ಯ ನಡೆಸುತ್ತಿರುವ ಯುದ್ಧದಲ್ಲಿ ರಶ್ಯದ ಪರ ಯುದ್ಧರಂಗಕ್ಕೆ ಇಳಿದಿದ್ದ ಉತ್ತರ ಕೊರಿಯಾದ 100ಕ್ಕೂ ಅಧಿಕ ಯೋಧರು ಸಾವನ್ನಪ್ಪಿದ್ದಾರೆ ಎಂದು ದಕ್ಷಿಣ ಕೊರಿಯಾದ ಸಂಸದ ಲೀ ಸಿಯೋಂಗ್ ಕುವೆನ್ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಡಿಸೆಂಬರ್ ನಲ್ಲಿ ಉತ್ತರ ಕೊರಿಯಾದ ತುಕಡಿ ಯುದ್ಧದಲ್ಲಿ ನೇರವಾಗಿ ಪಾಲ್ಗೊಂಡಿದ್ದು 15 ದಿನಗಳಲ್ಲೇ ಕನಿಷ್ಟ 100 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡವರ ಸಂಖ್ಯೆ 1000ವನ್ನು ದಾಟಬಹುದು ಎಂದು ರಾಷ್ಟ್ರೀಯ ಗುಪ್ತಚರ ಏಜೆನ್ಸಿ ವರದಿ ಮಾಡಿದೆ. ಮೃತ ಯೋಧರ ಸ್ಥಾನ ತುಂಬಲು ಮೀಸಲು ಯೋಧರನ್ನು ಉತ್ತರ ಕೊರಿಯಾ ರವಾನಿಸಬಹುದು. ಪರಿಚಿತವಲ್ಲದ ಯುದ್ಧಭೂಮಿಯಲ್ಲಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಯೋಧರಿಗೆ ಕಷ್ಟವಾಗಿದೆ. ಉಕ್ರೇನ್ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸಿದೆ ಎಂದವರು ಹೇಳಿದ್ದಾರೆ.
ಉತ್ತರ ಕೊರಿಯಾ ಸುಮಾರು 10,000 ಯೋಧರನ್ನು ರಶ್ಯಕ್ಕೆ ರವಾನಿಸಿದ್ದು ಇವರನ್ನು ಕಸ್ರ್ಕ್ ಪ್ರಾಂತದಲ್ಲಿ ನಿಯೋಜಿಸಿರುವುದಾಗಿ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಪಾಶ್ಚಿಮಾತ್ಯ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಕಸ್ರ್ಕ್ ಪ್ರಾಂತದ ಯುದ್ಧ ರಂಗದಲ್ಲಿ ಮೃತಪಟ್ಟ ಉತ್ತರ ಕೊರಿಯಾ ಯೋಧರ ಮುಖವನ್ನು ರಶ್ಯನ್ ಯೋಧರು ಸುಟ್ಟು ಹಾಕಿ, ಪರಿಚಯ ಸಿಗದಂತೆ ಮಾಡಿ ಬಳಿಕ ಸಮಾಧಿ ಮಾಡುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.