ಜಪಾನ್, ತೈವಾನ್ ಭೂಕಂಪ: ಸಾವಿರಕ್ಕೂ ಹೆಚ್ಚು ಮಂದಿಗೆ ಗಾಯ
Photo: twitter.com/Sskwrites
ಟೋಕಿಯೊ: ಜಪಾನ್ ಹಾಗೂ ನೆರೆಯ ತೈವಾನ್ನಲ್ಲಿ ಬುಧವಾರ ಸಂಭವಿಸಿದ ತೀವ್ರ ಭೂಕಂಪದಿಂದ ಒಂದು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ತೈವಾನ್ ಸಮೀಪ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದು ಸುನಾಮಿ ಅಲೆಗಳಿಗೆ ಕಾರಣವಾಗಿತ್ತು. 30 ಸೆಂಟಿ ಮೀಟರ್ ಎತ್ತರದ ಅಲೆಗಳು ಯೊಗಗುನಿ ದ್ವೀಪದ ಮೇಲೆ ಅಪ್ಪಳಿಸಿದ್ದವು. ಓನಿನಾವ ಕರಾವಳಿಯ ಜನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಪಾನ್ ಈಗಾಗಲೇ ಎಚ್ಚರಿಕೆ ನೀಡಿದೆ. ಮೂರು ಮೀಟರ್ ಎತ್ತರದ ದೈತ್ಯ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ತೈವಾನ್ ನಲ್ಲಿ ಪ್ರಬಲ ಭೂಕಂಪದಿಂದಾಗಿ ಎರಡು ಕಲ್ಲಿದ್ದಲು ಗಣಿಗಳಲ್ಲಿ 70ಕ್ಕೂ ಹೆಚ್ಚು ಗಣಿ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೂರ್ವ ತೈವಾನ್ನಲ್ಲಿ 1000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 9 ಮಂದಿ ಮೃತಪಟ್ಟಿದ್ದಾರೆ. ನ್ಯಾಷನಲ್ ಪಾರ್ಕ್ ನಲ್ಲಿ 42 ಮಂದಿ ಹೋಟೆಲ್ ಕಾರ್ಮಿಕರು ಇನ್ನೂ ನಾಪತ್ತೆಯಾಗಿದ್ದಾರೆ.
ತೈವಾನ್ ನಲ್ಲಿ ವಾಸಿಸುವ ಎಲ್ಲ ಭಾರತೀಯರು ಸ್ಥಳೀಯ ಅಧಿಕಾರಿಗಳು ನೀಡುವ ಸೂಚನೆಗಳನ್ನು ಹಾಗೂ ಮಾರ್ಗಸೂಚಿಯನ್ನು ಪಾಲಿಸುವಂತೆ ಭಾರತೀಯ ತೈಪೆ ಅಸೋಸಿಯೇಶನ್ ಮನವಿ ಮಾಡಿದೆ. ಭಾರತ ಚಾಚಿರುವ ಸಹಾಯ ಹಸ್ತಕ್ಕೆ ತೈವಾನ್ ನ ನಿರ್ಗಮಿತ ಅಧ್ಯಕ್ಷ ಸಾಯಿ ಇಂಗ್-ವೆನ್ ಮತ್ತು ಚುನಾಯಿತ ಅಧ್ಯಕ್ಷ ಲೀ ಚಿಂಗ್ ತೇ ಕೃತಜ್ಞತೆ ಸಲ್ಲಿಸಿದ್ದಾರೆ.