ಮಾಲ್ದೀವ್ಸ್ ಮಾಜಿ ಅಧ್ಯಕ್ಷರು ವಿದೇಶಿ ರಾಯಭಾರಿಯ ಆದೇಶ ಪಾಲಿಸುತ್ತಿದ್ದರು : ಅಧ್ಯಕ್ಷ ಮುಯಿಝು ಆರೋಪ
ಮುಹಮ್ಮದ್ ಮುಯಿಝು (Photo credit: bloomberg.com)
ಮಾಲೆ: ಮಾಲ್ದೀವ್ಸ್ ನ ಈ ಹಿಂದಿನ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸೊಲಿಹ್ ವಿದೇಶಿ ರಾಯಭಾರಿಯ ಆದೇಶದ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದರು ಮತ್ತು ದೇಶದ ಸ್ವಾತಂತ್ರ್ಯವನ್ನು ರಕ್ಷಿಸಲು ವಿಫಲವಾಗಿದ್ದಾರೆ ಎಂದು ಅಧ್ಯಕ್ಷ ಮುಹಮ್ಮದ್ ಮುಯಿಝ್ಝರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ `ಪಬ್ಲಿಕ್ ಸರ್ವಿಸ್ ಮೀಡಿಯಾ' ವರದಿ ಮಾಡಿದೆ.
ಮಾಲ್ದೀವ್ಸ್ ಸೇನೆಯ ಬಳಕೆಗೆ ಮತ್ತು ಮಾಲ್ದೀವ್ಸ್ ಸಮುದ್ರವ್ಯಾಪ್ತಿಯಲ್ಲಿ 24 ಗಂಟೆಗಳ ಕಣ್ಗಾವಲಿಗೆ ಟರ್ಕಿಯಿಂದ ಡ್ರೋನ್ ಖರೀದಿಸಿರುವ ಮುಯಿಝ್ಝು ಸರಕಾರದ ಕ್ರಮವನ್ನು ವಿಪಕ್ಷಗಳು ಟೀಕಿಸಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು `ಈ ಹಿಂದಿನ ಅಧ್ಯಕ್ಷರು ವಿದೇಶಿ ರಾಯಭಾರಿಯ ಆದೇಶದಂತೆ ಕೆಲಸ ಮಾಡುತ್ತಿದ್ದರು. ಇದರಿಂದ ವ್ಯಾಪಕ ಹಾನಿಯಾಗಿದೆ' ಎಂದರು. ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಡ್ರೋನ್ಗಳು ಲಭ್ಯವಿರುವಾಗ ಟರ್ಕಿಯಿಂದ ಅಧಿಕ ದರದ ಡ್ರೋನ್ ಖರೀದಿಯ ಅಗತ್ಯವಿರಲಿಲ್ಲ ಎಂದು ಪ್ರಧಾನ ವಿಪಕ್ಷ ಮಾಲ್ದೀವಿಯನ್ ಡೆಮೊಕ್ರಟಿಕ್ ಪಾರ್ಟಿ(ಎಂಡಿಪಿ) ಟೀಕಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಯಿಝ್ಝು `2018ರಿಂದ 2023ರವರೆಗೆ ಅಧಿಕಾರದಲ್ಲಿದ್ದ ಸಂದರ್ಭ ಎಂಡಿಪಿಗೆ ಭರ್ಜರಿ ಬಹುಮತವಿತ್ತು. ಆದರೆ ದ್ವೀಪರಾಷ್ಟ್ರದ ಸ್ವಾತಂತ್ರ್ಯವನ್ನು ರಕ್ಷಿಸಲು ವಿಫಲವಾಗಿದ್ದು ಅದನ್ನು ವಿದೇಶಿ ದೇಶವೊಂದರ ಕೈಗೆ ನೀಡಿತ್ತು. ಎಲ್ಲಾ ವಿಧದಲ್ಲೂ, ಆರ್ಥಿಕವಾಗಿಯೂ ನಾವು ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದೆವು. ಇದೆಲ್ಲವನ್ನೂ ಮಾಡಿದ ಅವರು, ದೇಶದ ಜನತೆ ಬಯಸುವ ಮಾರ್ಗದಲ್ಲಿ ಮಾಲ್ದೀವ್ಸ್ ಅನ್ನು ಇರಿಸುವ ನಮ್ಮ ಪ್ರಯತ್ನವನ್ನು ಅವರು(ವಿಪಕ್ಷ) ಇಷ್ಟಪಡುವುದಿಲ್ಲ' ಎಂದರು.