ಗಾಝಾ ಮೇಲೆ ಇಸ್ರೇಲ್ ದಾಳಿಗೆ ಅಮೆರಿಕ ಬೆಂಬಲ: ಶ್ವೇತಭವನದ ಇಫ್ತಾರ್ ಕೂಟದ ಆಹ್ವಾನವನ್ನು ತಿರಸ್ಕರಿಸಿದ ಮುಸ್ಲಿಂ ನಾಯಕರು
Photo: X
ವಾಷಿಂಗ್ಟನ್: ರಮಝಾನ್ ಪ್ರಯುಕ್ತವಾಗಿ ಶ್ವೇತಭವನವು ಇಫ್ತಾರ್ ಕೂಟಕ್ಕೆ ನೀಡಿರುವ ಆಹ್ವಾನವನ್ನು ತಿರಸ್ಕರಿಸಿರುವ ಮುಸ್ಲಿಂ ನಾಯಕರು, ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ಬಗ್ಗೆ ಅಮೆರಿಕಾ ಸರ್ಕಾರ ತಳೆದಿರುವ ನಿಲುವಿನ ಬಗ್ಗೆ ಚರ್ಚಿಸಲು ಮಂಗಳವಾರ ಸಂಜೆ ಅಧ್ಯಕ್ಷ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ.
ಗಾಝಾ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್ ಗೆ ಅಮೆರಿಕಾವು ಬೆಂಬಲ ನೀಡಿರುವುದರಿಂದ ಶ್ವೇತಭವನ ಆಯೋಜಿಸಿರುವ ಇಫ್ತಾರ್ ಕೂಟವು ಅನುಚಿತ ಎಂದು ಮುಸ್ಲಿಂ ನಾಯಕರು ಇಫ್ತಾರ್ ಕೂಟದ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಮುಸ್ಲಿಂ ನಾಯಕರು ಇಫ್ತಾರ್ ಕೂಟದ ಬದಲು ಇಸ್ರೇಲ್ ಬಗ್ಗೆ ತಳೆದಿರುವ ನೀತಿಯ ಬಗ್ಗೆ ಚರ್ಚಿಸಲು ಆದ್ಯತೆ ವ್ಯಕ್ತಪಡಿಸಿದ್ದಾರೆ. ಅವರ ವಿನಂತಿಗೆ ತಕ್ಕಂತೆ ಶ್ವೇತಭವನ ತನ್ನ ಯೋಜನೆಯನ್ನು ಸರಿ ಹೊಂದಿಸಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ತಿಳಿಸಿದ್ದಾರೆ.
ಇಸ್ರೇಲ್ ಗೆ ಬೆಂಬಲಿಸುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿರುದ್ಧ ಈ ಹಿಂದೆಯೂ ಮುಸ್ಲಿಂ ಜಾಗತಿಕ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.
ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ನ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ ಕನಿಷ್ಟ 1,200 ಮಂದಿ ಮೃತಪಟ್ಟಿದ್ದರು ಮತ್ತು ಸುಮಾರು 250 ಮಂದಿಯನ್ನು ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ 32,000ಕ್ಕೂ ಅಧಿಕ ಫೆಲೆಸ್ತೀನೀಯರು ಮೃತಪಟ್ಟಿದ್ದು ಗಾಝಾದ ಜನಸಂಖ್ಯೆಯ 80%ಕ್ಕೂ ಅಧಿಕ ಮಂದಿ ಸ್ಥಳಾಂತರಗೊಂಡಿದ್ದಾರೆ. ವ್ಯಾಪಕ ನಾಶ-ನಷ್ಟ ಸಂಭವಿಸಿದೆ ಎಂದು ಗಾಝಾದ ಆರೋಗ್ಯ ಇಲಾಖೆ ವರದಿ ಮಾಡಿದೆ. ಗಾಝಾದ ಸಂಪೂರ್ಣ ಜನಸಂಖ್ಯೆ ಸಾಕಷ್ಟು ಆಹಾರ ಪಡೆಯಲು ಹೆಣಗಾಡುತ್ತಿದೆ ಮತ್ತು ವಿಶೇಷವಾಗಿ ಉತ್ತರ ಗಾಝಾದಲ್ಲಿ ಸಾವಿರಾರು ಜನರು ಬರಗಾಲದ ಅಂಚಿನಲ್ಲಿದ್ದಾರೆ ಎಂದು ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ನೆರವು ಏಜೆನ್ಸಿಗಳು ಎಚ್ಚರಿಕೆ ನೀಡಿವೆ.