ವಿಶ್ವದ ಅತ್ಯುತ್ತಮ ಬೀಫ್ ಉತ್ಪಾದನೆ ನನ್ನ ಗುರಿ ಎಂದ ಮಾರ್ಕ್ ಝುಕರ್ ಬರ್ಗ್!
ಒಣ ಹಣ್ಣುಗಳು ತಿನ್ನಿಸಿ, ಬಿಯರ್ ಕುಡಿಸಿ ಗೋವುಗಳನ್ನು ಬೆಳೆಸುತ್ತಿರುವ ಮೆಟಾ ಒಡೆಯ
Photo: facebook.com/zuck
ಕವಾಯಿ (ಅಮೆರಿಕಾ): ಕೋಟ್ಯಧಿಪತಿ, ಫೇಸ್ ಬುಕ್ ನ ಕಂಪೆನಿ ಮೆಟಾದ ಮಾಲಕ ಮಾರ್ಕ್ ಝುಕರ್ ಬರ್ಗ್ ತಮ್ಮನ್ನು ಯಾವಾಗಲೂ ಉದ್ಯಮ, ವ್ಯಾಯಾಮದಲ್ಲಿ ತೊಡಗಿಸಿಕೊಂಡಿರುತ್ತಾರೆ. ಸದ್ಯ, ಅವರು ಮೆಟಾ ಹೆಸರಿನಲ್ಲಿ ಹಲವಾರು ಉತ್ಪನ್ನಗಳನ್ನು ಮಾರುಕಟ್ಟೆ ತರುತ್ತಿದ್ದಾರೆ. ಈ ಪೈಕಿ ಸಾಮಾಜಿಕ ಮಾಧ್ಯಮ ಫೇಸ್ ಬುಕ್, ಮೆಸೇಜಿಂಗ್ ತಂತ್ರಾಂಶ ವಾಟ್ಸ್ ಆ್ಯಪ್, ಫೋಟೊ, ವೀಡಿಯೊ ಕೇಂದ್ರಿತ ಸಾಮಾಜಿಕ ವೇದಿಕೆ ಇನ್ಸ್ಟಾಗ್ರಾಮ್, ಟ್ವಿಟರ್ ಗೆ ಪ್ರತಿಸ್ಪರ್ಧಿಯಾದ ಥ್ರೆಡ್ಸ್ ಹಾಗೂ ಹಾರೈಝಾನ್ ಮೆಟಾವರ್ಸ್ ಸೇರಿವೆ. ಆದರೆ, ಅದಷ್ಟು ಮಾತ್ರವಲ್ಲ. ಝುಕರ್ ಬರ್ಗ್ ಹೂಡಿಕೆಗಳು ಹಾಗೂ ಉದ್ಯಮಗಳು ವ್ಯಾಪಕವಾಗಿ ಹರಡಿಕೊಂಡಿವೆ. ಈ ಪೈಕಿ ಹವಾಯಿಯ ಕವಾಯಿಯಲ್ಲಿರುವ ಕೂಲೌ ರಾಂಚ್ ಎಂಬ ಗೋ ಸಾಕಾಣಿಕೆ ಉದ್ಯಮ ಹೊಸದಾಗಿ ಸೇರ್ಪಡೆಯಾಗಿದೆ ಎಂದು indiatoday.in ವರದಿ ಮಾಡದೆ.
ಬುಧವಾರ ಫೇಸ್ ಬುಕ್ ಹಾಗು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಝುಕರ್ ಬರ್ಗ್, ವಿಶ್ವದಲ್ಲೇ ಅತ್ಯುತ್ತಮ ಗುಣಮಟ್ಟದ ಬೀಫ್ ಅನ್ನು ಉತ್ಪಾದಿಸುವ ಗುರಿಯೊಂದಿಗೆ ಗೋ ಸಾಕಾಣಿಕೆ ಮಾಡಲು ಉದ್ದೇಶಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕಾಗಿ ಗೋವುಗಳಿಗೆ ಉಣಿಸಲು ಸ್ಥಳೀಯವಾಗಿ ಬೆಳೆದಿರುವ ಸಂಪನ್ಮೂಲಗಳನ್ನು ಬಳಸುತ್ತಿದ್ದೇನೆ. ಹೀಗಾಗಿ ಅವರು ಗೋವುಗಳಿಗೆ ಮಕಾಡಮಿಯ ಊಟ ಹಾಗೂ ಜಾನುವಾರುಗಳಿಂದ ಉತ್ಪಾದಿಸಿರುವ ಬಿಯರ್ ಅನ್ನು ಕೊಡುತ್ತಿದ್ದಾರೆ. ಅವರ ‘ತೋಟದಿಂದ ಮೇಜಿಗೆ’ ಧೋರಣೆಯು ಗೋವುಗಳ ಆಹಾರ ಕ್ರಮಕ್ಕೆ ಹೊಂದಾಣಿಕೆಯಾಗುವಂತೆ ಮಕಾಡಮಿಯ ಮರಗಳನ್ನು ಪರಿಸರ ಪ್ರಜ್ಞೆಯೊಂದಿಗೆ ಬೆಳೆಸುವ ಗುರಿ ಹೊಂದಿದೆ.
“ನಮಗೆ ಒಟ್ಟಾರೆ ಪ್ರಕ್ರಿಯೆಯು ಸಮಗ್ರವಾಗಿರಬೇಕಿದೆ. ಪ್ರತಿ ಗೋವುಗಳೂ ಪ್ರತಿ ವರ್ಷ 5000-10000 ಪೌಂಡ್ ಗಳಷ್ಟು ಆಹಾರವನ್ನು ಸೇವಿಸುತ್ತವೆ. ಹೀಗಾಗಿ ಹಲವಾರು ಎಕರೆಗಳಲ್ಲಿ ಮಕಾಡಮಿಯ ಮರಗಳನ್ನು ಬೆಳೆಸಲಾಗಿದೆ. ಮಕಾಡಮಿಯ ಗಿಡಗಳನ್ನು ನೆಡಲು ಹಾಗೂ ನನ್ನ ವಿಭಿನ್ನ ಪ್ರಾಣಿಗಳನ್ನು ಆರೈಕೆ ಮಾಡಲು ನನ್ನ ಪುತ್ರಿ ನನಗೆ ನೆರವು ನೀಡಿದ್ದಾಳೆ” ಎಂದು ಅವರು ಬರೆದುಕೊಂಡಿದ್ದಾರೆ.
ಗೋಸಾಕಾಣಿಕೆಯಲ್ಲಿನ ಝುಕರ್ ಬರ್ಗ್ ಉದ್ಯಮವು, ಅವರಿಗೆ ಕೃಷಿ, ಸುಸ್ಥಿರತೆ ಹಾಗೂ ತಮ್ಮ ಜಾನುವಾರುಗಳಿಂದ ಗುಣಮಟ್ಟದ ಉತ್ಪನ್ನವನ್ನು ಉತ್ಪಾದಿಸಲು ಇರುವ ಆಸಕ್ತಿಯನ್ನು ಬಿಂಬಿಸುತ್ತಿದೆ. ಝುಕರ್ ಬರ್ಗ್ ತಮ್ಮ ಗೋಸಾಕಾಣಿಕೆಯನ್ನು ಉತ್ತಮ ಆಹಾರ ಮತ್ತು ಸುಸ್ಥಿರತೆಯೆಡೆಗಿನ ಹೆಜ್ಜೆ ಎಂದು ಹೇಳಿಕೊಳ್ಳುತ್ತಿದ್ದರೂ, ಗೋಮಾಂಸ ಸೇವನೆ ಮಾಡದಿರುವವರು ಅವರ ನಡೆಯನ್ನು ಆಷಾಢಭೂತಿತನ ಎಂದು ಟೀಕಿಸುತ್ತಿದ್ದಾರೆ.
“ಅವರು (ಝುಕರ್ ಬರ್ಗ್) ತಾನು ಜಾನುವಾರುಗಳ ಆರೈಕೆ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ, ಅಂತಿಮವಾಗಿ ಅವರದನ್ನು ತಿನ್ನಲು ತಮ್ಮ ಊಟದ ಮೇಜಿಗೆ ತರುತ್ತಿದ್ದಾರೆ. ಅಂದಮೇಲೆ ಆರೈಕೆ ಎಲ್ಲಿದೆ?” ಎಂದು ಟೀಕಾಕಾರರು ಪ್ರಶ್ನಿಸುತ್ತಿದ್ದಾರೆ. “ಇದು ಸಂಪೂರ್ಣವಾಗಿ ಹಾಸ್ಯಾಸ್ಪದ, ಹಣ, ಭೂಮಿ ಹಾಗೂ ಸಂಪನ್ಮೂಲದ ವ್ಯರ್ಥ” ಎಂದು ಸಸ್ಯಾಹಾರಿಗಳು ಟೀಕೆ ಮಾಡಿದ್ದಾರೆ. “ಪರಿಸರವನ್ನು ನಾಶ ಮಾಡುತ್ತಲೇ ಇರಿ. ಹಸಿರು ಮನೆ ಅನಿಲಕ್ಕೆ ಗೋಸಾಕಾಣಿಕೆ ಮಾಡುವುದು ಬಹು ದೊಡ್ಡ ಕಾರಣ. ಇಂತಹ ಅಸಹ್ಯಕರ ಉದ್ಯಮವನ್ನು ಅವರು ಮಾಡುತ್ತಿದ್ದಾರೆ” ಎಂದು ಮತ್ತೊಬ್ಬ ಬಳಕೆದಾರರು ಕಿಡಿ ಕಾರಿದ್ದಾರೆ.
ಆಸಕ್ತಿಕರ ಸಂಗತಿಯೆಂದರೆ, ಉತ್ತಮ ನೈಸರ್ಗಿಕ ಬೀಫ್ ಉತ್ಪಾದಿಸುವ ಝುಕರ್ ಬರ್ಗ್ ಯೋಜನೆಯು ಅವರ ಪ್ರತಿಸ್ಪರ್ಧಿ, ಪರಿಸರಕೇಂದ್ರಿತ ಯೋಜನೆಗಳಲ್ಲಿ ಸಕ್ರಿಯ ಹೂಡಿಕೆಯನ್ನೂ ಮಾಡುತ್ತಿರುವ ಮತ್ತೊಬ್ಬ ಕೋಟ್ಯಧಿಪತಿ ಮೈಕ್ರೊಸಾಫ್ಟ್ ನ ಮಾಲಕ ಬಿಲ್ ಗೇಟ್ಸ್ ನಿಲುವಿಗೆ ವಿರುದ್ಧವಿದೆ. ಅವರೊಮ್ಮೆ, ಸಕಾರಾತ್ಮಕ ಪರಿಸರ ಬದಲಾವಣೆಗಾಗಿ ಶ್ರೀಮಂತ ದೇಶಗಳು ನೈಸರ್ಗಿಕ ಬೀಫ್ ಅನ್ನು ತ್ಯಜಿಸಿ, ಕೃತಕ ಬೀಫ್ ಕಡೆ ತಮ್ಮ ಗಮನವನ್ನು ಸಂಪೂರ್ಣವಾಗಿ ಕೇಂದ್ರೀಕರಿಸಬೇಕು ಎಂದು ಕರೆ ನೀಡಿದ್ದರು. ಈ ಕುರಿತು MIT ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದ ಬಿಲ್ ಗೇಟ್ಸ್, “ಎಲ್ಲ ಶ್ರೀಮಂತ ದೇಶಗಳು ಶೇ. 100ರಷ್ಟು ಕೃತಕ ಬೀಫ್ ನತ್ತ ತೆರಳಬೇಕು ಎಂದು ನಾನು ಬಯಸುತ್ತೇನೆ. ಅದರ ರುಚಿಯು ವಿಭಿನ್ನವಾಗಿದೆ ಎಂದು ನಿಮಗೆ ಮೊದಲಿಗೆ ಅನ್ನಿಸಬಹುದಾದರೂ, ಕಾಲ ಕಳೆದಂತೆ ಅವರೇ ಅದನ್ನು ಮತ್ತಷ್ಟು ರುಚಿಕರವಾಗಿ ತಯಾರಿಸಲಿದ್ದಾರೆ ಎಂಬ ವಾದವಿದೆ” ಎಂದು ಹೇಳಿದ್ದರು.