ಮ್ಯಾನ್ಮಾರ್: ಆಂಗ್ ಸಾನ್ ಸೂಕಿಗೆ 5 ಪ್ರಕರಣಗಳಲ್ಲಿ ಕ್ಷಮಾದಾನ
Photo: twitter/OfficialSuuKyi
ಯಾಂಗಾನ್: ಮ್ಯಾನ್ಮಾರ್ನಲ್ಲಿ ಬೌದ್ಧ ಧಾರ್ಮಿಕ ದಿನಾಚರಣೆಯ ಅಂಗವಾಗಿ 7000ಕ್ಕೂ ಅಧಿಕ ಕೈದಿಗಳಿಗೆ ಸೇನಾಡಳಿತವು ಕ್ಷಮಾದಾನ ನೀಡಿದ್ದು ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿಗೆ 5 ಕ್ರಿಮಿನಲ್ ಪ್ರಕರಣಗಳಲ್ಲಿ ಕ್ಷಮಾದಾನ ದೊರಕಿದ್ದು ಶಿಕ್ಷೆಯ ಅವಧಿ 5 ವರ್ಷ ಕಡಿಮೆಯಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
ಮ್ಯಾನ್ಮಾರ್ ಮಿಲಿಟರಿ ಕೌನ್ಸಿಲ್ನ ಮುಖ್ಯಸ್ಥ ಜನರಲ್ ಮಿನ್ಆಂಗ್ ಲಿಯಾಂಗ್ ಒಟ್ಟು 7749 ಕೈದಿಗಳಿಗೆ ಕ್ಷಮಾದಾನ ನೀಡಿದ್ದು ಕೆಲವು ಕೈದಿಗಳ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಲಾಗಿದೆ. ಜತೆಗೆ 125 ವಿದೇಶಿ ಕೈದಿಗಳು ಹಾಗೂ ಜನಾಂಗೀಯ ಸಶಸ್ತ್ರ ಗುಂಪಿನ 22 ಸದಸ್ಯರಿಗೆ ಕ್ಷಮಾದಾನ ನೀಡಲಾಗಿದೆ. ಜನಾಂಗೀಯ ಸಶಸ್ತ್ರ ಗುಂಪಿನ ಜತೆ ಸಂಪರ್ಕವಿದ್ದ 72 ಜನರ ಜೈಲುಶಿಕ್ಷೆಯನ್ನು ರದ್ದುಗೊಳಿಸಲಾಗಿದೆ. ಮಾಜಿ ಪ್ರಧಾನಿ ವಿನ್ ಮಿಂಟ್ ಅವರ ಶಿಕ್ಷೆಯ ಅವಧಿಯನ್ನೂ ಕಡಿತಗೊಳಿಸಲಾಗಿದೆ.
ಸೂಕಿ ವಿರುದ್ಧ 19 ಪ್ರಕರಣಗಳಲ್ಲಿ ಒಟ್ಟು 33 ವರ್ಷದ ಜೈಲುಶಿಕ್ಷೆ ವಿಧಿಸಲಾಗಿತ್ತು. ಇದೀಗ 5 ಪ್ರಕರಣಗಳಲ್ಲಿ 6 ವರ್ಷದ ಶಿಕ್ಷೆಯಿಂದ ವಿನಾಯಿತಿ ದೊರಕಿದ್ದರೂ 27 ವರ್ಷದ ಜೈಲುಶಿಕ್ಷೆ ಜಾರಿಯಲ್ಲಿದೆ ಎಂದು ಸೇನಾಡಳಿತದ ಹೇಳಿಕೆ ತಿಳಿಸಿದೆ. ದೇಶದಲ್ಲಿ ಜಾರಿಯಲ್ಲಿರುವ ತುರ್ತು ಪರಿಸ್ಥಿತಿಯನ್ನು ಮತ್ತೆ 6 ವರ್ಷ ವಿಸ್ತರಿಸುವುದಾಗಿ ಮ್ಯಾನ್ಮಾರ್ ಸೇನಾಡಳಿತ ಹೇಳಿಕೆ ನೀಡಿದ ಮರುದಿನ ಕೈದಿಗಳಿಗೆ ಕ್ಷಮಾದಾನ ಘೋಷಿಸಲಾಗಿದೆ.