ಮ್ಯಾನ್ಮಾರ್: ಚೀನಾ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದ
Photo: aljazeera.com
ಯಾಂಗಾನ್: ಚೀನಾ ಮಧ್ಯಸ್ಥಿಕೆಯಲ್ಲಿ ಮ್ಯಾನ್ಮಾರ್ ನ ಸೇನಾಡಳಿತ ಮತ್ತು ಸಶಸ್ತ್ರ ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳ ಒಕ್ಕೂಟದ ನಡುವೆ ಕದನ ವಿರಾಮ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಲಾಗಿದೆ.
ಚೀನಾದ ಮಧ್ಯಸ್ಥಿಕೆಯಲ್ಲಿ ದಕ್ಷಿಣ ಚೀನಾದ ಕುನ್ಮಿಂಗ್ ನಗರದಲ್ಲಿ ನಡೆದ ಸಭೆಯಲ್ಲಿ ಕದನ ವಿರಾಮ ಒಪ್ಪಂದಕ್ಕೆ ಬರಲಾಗಿದೆ ಎಂದು ಸೇನಾಡಳಿತದ ವಕ್ತಾರ ಝಾವ್ ಮಿನ್ಟುನ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಕದನ ವಿರಾಮ ಒಪ್ಪಂದವನ್ನು ಒಕ್ಕೂಟವೂ ದೃಢಪಡಿಸಿದ್ದು ಚೀನಾದೊಂದಿಗಿನ ಗಡಿಯನ್ನು ಮತ್ತೆ ತೆರೆಯುವುದಾಗಿ ಘೋಷಿಸಿದೆ.
ಎರಡೂ ಕಡೆಯವರು ತಕ್ಷಣ ಕದನ ವಿರಾಮಕ್ಕೆ ಸಮ್ಮತಿಸಿದ್ದು ಯಾವುದೇ ವಿವಾದ ಮತ್ತು ಬೇಡಿಕೆಯನ್ನು ಶಾಂತಿಯುತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಒಪ್ಪಿದ್ದಾರೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೊ ನಿಂಗ್ ಹೇಳಿದ್ದಾರೆ.
ಹಲವು ತಿಂಗಳಿಂದ ನಡೆಯುತ್ತಿದ್ದ ಸಂಘರ್ಷವು ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದು 2021ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸೇನಾಡಳಿತಕ್ಕೆ ಎದುರಾಗಿದ್ದ ಬಹುದೊಡ್ಡ ಬೆದರಿಕೆಯಾಗಿತ್ತು. ಉತ್ತರ ಮ್ಯಾನ್ಮಾರ್ ನ ಶಾನ್ ರಾಜ್ಯದಲ್ಲಿ ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳ ಒಕ್ಕೂಟವು ಸೇನಾಡಳಿತದ ವಿರುದ್ಧ ಅಕ್ಟೋಬರ್ ನಲ್ಲಿ ಆಕ್ರಮಣ ಆರಂಭಿಸಿದ ಬಳಿಕ ಸಂಘರ್ಷ ಉಲ್ಬಣಗೊಂಡಿತ್ತು. ಚೀನಾದ ಗಡಿಭಾಗದಲ್ಲಿರುವ ಹಲವು ಪ್ರಮುಖ ನಗರಗಳನ್ನು ಒಕ್ಕೂಟ ವಶಕ್ಕೆ ಪಡೆದಿರುವುದು ಚೀನಾದೊಂದಿಗಿನ ವ್ಯಾಪಾರ ವಹಿವಾಟಿಗೆ ತೊಡಕಾಗಿತ್ತು.