ಮ್ಯಾನ್ಮಾರ್ | ತುರ್ತು ಪರಿಸ್ಥಿತಿ 6 ತಿಂಗಳು ವಿಸ್ತರಣೆ
PC:pinterest
ಯಾಂಗಾನ್ : ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಮ್ಯಾನ್ಮಾರ್ ನಲ್ಲಿ ಜಾರಿಯಲ್ಲಿರುವ ತುರ್ತು ಪರಿಸ್ಥಿತಿಯನ್ನು ಮತ್ತೆ 6 ತಿಂಗಳು ವಿಸ್ತರಿಸಿರುವುದಾಗಿ ಮ್ಯಾನ್ಮಾರ್ ನ ಸೇನಾಡಳಿತ ಬುಧವಾರ ಘೋಷಿಸಿದೆ.
ಗಡಿ ಪ್ರದೇಶಗಳಲ್ಲಿ ಬುಡಕಟ್ಟು ಗುಂಪಿನ ಪಡೆಗಳಿಂದ ತೀವ್ರ ಪ್ರತಿರೋಧ ಎದುರಿಸುತ್ತಿರುವ ಸೇನಾಡಳಿತ ಅಧಿಕಾರದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಮತದಾರರ ಪಟ್ಟಿಗಾಗಿ ಜನಸಂಖ್ಯೆಯ ಅಂಕಿ ಅಂಶವನ್ನು ಒಟ್ಟುಗೂಡಿಸಲು ಸೇನಾಡಳಿತಕ್ಕೆ ಹೆಚ್ಚಿನ ಸಮಯಾವಕಾಶವನ್ನು ಒದಗಿಸುವ ಉದ್ದೇಶದಿಂದ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಲಾಗಿದೆ. ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಅತ್ಯಗತ್ಯವಾಗಿದೆ' ಎಂದು ಮಿಲಿಟರಿ ನಿಯಂತ್ರಣದ `ನ್ಯಾಷನಲ್ ಡಿಫೆನ್ಸ್ ಆ್ಯಂಡ್ ಸೆಕ್ಯುರಿಟಿ ಕೌನ್ಸಿಲ್' ಹೇಳಿಕೆ ನೀಡಿದೆ. ಮುಂದಿನ ವರ್ಷ ಚುನಾವಣೆ ನಡೆಸುವುದಾಗಿ ಸೇನಾಡಳಿತ ಈ ಹಿಂದೆ ಘೋಷಿಸಿತ್ತು.
2021ರಲ್ಲಿ ನಡೆದ ಕ್ಷಿಪ್ರದಂಗೆಯ ಮೂಲಕ ಆಡಳಿತವನ್ನು ವಶಕ್ಕೆ ಪಡೆದಿದ್ದ ಸೇನೆಯು, ದೇಶದಲ್ಲಿ ಭುಗಿಲೆದ್ದ ಪ್ರತಿಭಟನೆಯನ್ನು ನಿಯಂತ್ರಿಸಲು ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ ಬಳಿಕ ಪ್ರತೀ 6 ತಿಂಗಳಿಗೆ ವಿಸ್ತರಿಸುತ್ತಾ ಬಂದಿದೆ.