ಕಾಂಗೋ | ನಿಗೂಢ ಸೋಂಕಿನಿಂದ ಮೃತರ ಸಂಖ್ಯೆ 79ಕ್ಕೆ ಏರಿಕೆ ; ವಿಶ್ವ ಆರೋಗ್ಯ ಸಂಸ್ಥೆ ತಜ್ಞರ ತಂಡ ರವಾನೆ
ಸಾಂದರ್ಭಿಕ ಚಿತ್ರ
ಕಿನ್ಷಾಸ : ಕಾಂಗೋದಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವ ನಿಗೂಢ ಸೋಂಕಿಗೆ `ಎಕ್ಸ್' ಕಾಯಿಲೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೆಸರಿಸಿದ್ದು ಅಕ್ಟೋಬರ್ ಅಂತ್ಯದಿಂದ ಕನಿಷ್ಠ 79 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಕಾಂಗೋ ಗಣರಾಜ್ಯದ ಆರೋಗ್ಯ ಅಧಿಕಾರಿಗಳು ರೋಗದ ಕಾರಣ ಪತ್ತೆಹಚ್ಚಲು ನಿರಂತರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು ಒಂದೂವರೆ ತಿಂಗಳಲ್ಲೇ ವರದಿಯಾಗಿರುವ 376 ಪ್ರಕರಣಗಳಲ್ಲಿ 200ಕ್ಕೂ ಅಧಿಕ ಮಕ್ಕಳು ಸೇರಿದ್ದಾರೆ ಎಂದು ರೋಗ ತಡೆ ಮತ್ತು ನಿಯಂತ್ರಣಕ್ಕಾಗಿನ ಆಫ್ರಿಕಾ ಕೇಂದ್ರಗಳ ನಿರ್ದೇಶಕ ಜೀನ್ ಕಸೆಯಾ ಹೇಳಿದ್ದಾರೆ.
ಜ್ವರ, ತಲೆನೋವು, ಕೆಮ್ಮು, ಉಸಿರಾಟದ ತೊಂದರೆ ಮತ್ತು ರಕ್ತಹೀನತೆಯಂತಹ ಜ್ವರದ ಲಕ್ಷಣಗಳನ್ನು ಹೊಂದಿರುವ ಈ ರೋಗದ ಪ್ರಥಮ ಪ್ರಕರಣ ಕ್ವಾಂಗೊ ಪ್ರಾಂತದ ಪಾಂಝಿ ಆರೋಗ್ಯ ವಲಯದಲ್ಲಿ ಅಕ್ಟೋಬರ್ 24ರಂದು ಪತ್ತೆಯಾಗಿತ್ತು ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ಡಿಸೆಂಬರ್ 1ರಂದು ಮಾಹಿತಿ ನೀಡಲಾಗಿದೆ. 5ರಿಂದ 6 ವಾರಗಳ ವಿಳಂಬದ ಅವಧಿಯಲ್ಲಿ ಬಹಳಷ್ಟು ಬೆಳವಣಿಗೆ ನಡೆದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸೋಂಕು ಕೋವಿಡ್ನಂತೆ ಜಾಗತಿಕ ಮಟ್ಟಕ್ಕೆ ಪ್ರಸಾರಗೊಳ್ಳುವ ಭೀತಿ ಎದುರಾಗಿದ್ದು ಇದನ್ನು `ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ' ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ್ದು ತಜ್ಞರ ತಂಡ, ಅಗತ್ಯ ಔಷಧಗಳು ಹಾಗೂ ರೋಗ ನಿರ್ಣಯದ ಕಿಟ್ಗಳನ್ನು ಕಾಂಗೋಗೆ ರವಾನಿಸಿದೆ.
ಈ ಮಧ್ಯೆ, ಜೊಹಾನ್ಸ್ ಬರ್ಗ್ ಮತ್ತು ಇಥಿಯೋಪಿಯಾದ ರಾಜಧಾನಿ ಅದೀಸ್ ಅಬಾಬದಿಂದ ಆಗಮಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಅನ್ನು ಹೆಚ್ಚಿಸುವುದಾಗಿ ಹಾಂಕಾಂಗ್ ಅಧಿಕಾರಿಗಳು ಘೋಷಿಸಿದ್ದಾರೆ. ಕಾಂಗೋ ದೇಶಕ್ಕೆ ಅತೀ ಅಗತ್ಯವಿದ್ದರೆ ಮಾತ್ರ ಪ್ರಯಾಣಿಸುವಂತೆ ಪ್ರಜೆಗಳಿಗೆ ಜಪಾನ್ ಸಲಹೆ ನೀಡಿದೆ.