ನಾಸಾದ ಚಂದ್ರಯಾನ ಸವಾಲು: 25 ಕೋಟಿ ರೂ. ಗೆಲ್ಲುವ ಅವಕಾಶ
PC : X \ @NASA
ವಾಷಿಂಗ್ಟನ್: ಮುಂಬರುವ ಚಂದ್ರಯಾನ ಕಾರ್ಯಾಚರಣೆಯ ಸಂದರ್ಭ ಮಹತ್ವದ ಸವಾಲನ್ನು ಎದುರಿಸಲು ನಾಸಾ ಸಿದ್ಧವಾಗಿದ್ದು ಗಗನಯಾತ್ರಿಗಳು ಚಂದ್ರನ ಮೇಲ್ಮೈಯಲ್ಲಿ ಉಳಿಸಿ ಬರುವ ತ್ಯಾಜ್ಯಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುವ ವ್ಯವಸ್ಥೆ ಅಭಿವೃದ್ಧಿಪಡಿಸುವವರಿಗೆ ನಗದು ಬಹುಮಾನ ಘೋಷಿಸಿದೆ.
`ಲೂನಾರ್ ಮರುಬಳಕೆ ಸವಾಲಿನ' ಭಾಗವಾಗಿ ಚಂದ್ರನೆಡೆಗೆ ದೀರ್ಘಾವಧಿಯ ಕಾರ್ಯಕ್ರಮದ ಸಂದರ್ಭ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಮರುಬಳಕೆ ಮಾಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ತಂಡ ಅಥವಾ ವ್ಯಕ್ತಿಗಳಿಗೆ ಸುಮಾರು 25 ಕೋಟಿ ರೂ. ಬಹುಮಾನ ನೀಡುವುದಾಗಿ ನಾಸಾ ಘೋಷಿಸಿದೆ.
2026ರ ಸೆಪ್ಟಂಬರ್ ನಲ್ಲಿ ಚಂದ್ರನಲ್ಲಿ ಮಾನವರನ್ನು ಇಳಿಸುವ ಕಾರ್ಯಾಚರಣೆಯನ್ನು ನಾಸಾ ನಡೆಸಲಿದ್ದು 50 ವರ್ಷಗಳಲ್ಲಿ ಮೊದಲ ಬಾರಿಗೆ ಚಂದ್ರನಲ್ಲಿ ಗಗನಯಾತ್ರಿಗಳು ಹೆಜ್ಜೆ ಊರಲಿದ್ದಾರೆ. ಚಂದ್ರನ ಮೇಲ್ಮೈಯಲ್ಲಿ ಸುಸ್ಥಿರ ಮಾನವ ಉಪಸ್ಥಿತಿಯನ್ನು ಸ್ಥಾಪಿಸುವ ಉದ್ದೇಶವನ್ನು ನಾಸಾ ಹೊಂದಿದೆ. ಈ ಹಿಂದಿನ ಅಪೋಲೋ ಕಾರ್ಯಕ್ರಮದಂತಹ ಐತಿಹಾಸಿಕ ಕಾರ್ಯಕ್ರಮದ ಸಂದರ್ಭ ಗಗನಯಾತ್ರಿಗಳು ಚಂದ್ರನ ಮೇಲ್ಮೈಯಲ್ಲಿ 96 ಬ್ಯಾಗ್ಗಳಷ್ಟು ಮಾನವ ತ್ಯಾಜ್ಯ ಹಾಗೂ ಇತರ ತ್ಯಾಜ್ಯಗಳನ್ನು ಉಳಿಸಿ ಬಂದಿದ್ದಾರೆ. ಗಗನ ಯಾತ್ರಿಗಳು ಚಂದ್ರನಲ್ಲಿ ದೀರ್ಘಾವಧಿಯ ವಾಸ್ತವ್ಯಕ್ಕೆ ಮುಂದಾಗಿರುವಾಗ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ನಿರ್ಣಾಯಕವಾಗುತ್ತದೆ ಎಂದು ನಾಸಾದ ಅಧಿಕಾರಿ ಆಮಿ ಕಾಮಿನ್ಸ್ಕಿ ಹೇಳಿದ್ದಾರೆ.