ಉಕ್ರೇನ್ ಕ್ಷಿಪಣಿ ನಿರ್ಬಂಧ ತೆರವಾದರೆ ನೇಟೊ - ರಶ್ಯ ಯುದ್ಧ | ವ್ಲಾದಿಮಿರ್ ಪುಟಿನ್ ಎಚ್ಚರಿಕೆ
ವ್ಲಾದಿಮಿರ್ ಪುಟಿನ್ | PTI
ಮಾಸ್ಕೋ : ರಶ್ಯದ ಭೂಪ್ರದೇಶದೊಳಗೆ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ಬಳಸಲು ಅಮೆರಿಕವು ಉಕ್ರೇನ್ಗೆ ಅನುಮತಿಸಿದರೆ ನೇಟೊ ದೇಶಗಳು ರಶ್ಯದೊಂದಿಗೆ ಯುದ್ಧ ನಡೆಸಬೇಕಾಗುತ್ತದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಪಾಶ್ಚಿಮಾತ್ಯ ಕ್ಷಿಪಣಿಗಳ ಅನುಷ್ಠಾನವನ್ನು ನೇಟೊ ಮಿಲಿಟರಿ ಸಿಬ್ಬಂದಿ ನಡೆಸಬೇಕಾಗುತ್ತದೆ. ಇದು ನೇಟೊವನ್ನು ರಶ್ಯದೊಂದಿಗೆ ನೇರ ಮುಖಾಮುಖಿಗೆ ತರಲಿದೆ ಎಂದು ಪುಟಿನ್ ಪ್ರತಿಪಾದಿಸಿದ್ದಾರೆ. ಸುಮಾರು ಎರಡೂವರೆ ವರ್ಷದಿಂದ ಮುಂದುವರಿದಿರುವ ಯುದ್ಧದಲ್ಲಿ ರಶ್ಯದ ಭೂಪ್ರದೇಶದೊಳಗೆ ದಾಳಿ ನಡೆಸಬಲ್ಲ ದೀರ್ಘ ವ್ಯಾಪ್ತಿಯ ಪಾಶ್ಚಿಮಾತ್ಯ ಕ್ಷಿಪಣಿಗಳನ್ನು ಬಳಸಲು ಅನುಮತಿ ನೀಡುವಂತೆ ಉಕ್ರೇನ್ ನಿರಂತರ ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಅಮೆರಿಕ ಮತ್ತು ಬ್ರಿಟನ್ನ ಉನ್ನತ ಅಧಿಕಾರಿಗಳು ನಿರ್ಬಂಧ ಸಡಿಲಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ವರದಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಪುಟಿನ್ `ಇದರರ್ಥ ನೇಟೊ ರಶ್ಯದೊಂದಿಗೆ ಯುದ್ಧ ನಡೆಸಲಿದೆ' ಎಂದರು. ಈ ನಡೆಯು ಗಮನಾರ್ಹ ರೀತಿಯಲ್ಲಿ ಸಂಘರ್ಷದ ಸ್ವರೂಪವನ್ನು ಬದಲಾಯಿಸುತ್ತದೆ. ಹೀಗೆ ಮಾಡಿದರೆ ನೇಟೊ ದೇಶಗಳು, ಅಮೆರಿಕ, ಯುರೋಪಿಯನ್ ದೇಶಗಳು ರಶ್ಯದೊಂದಿಗೆ ಯುದ್ಧದಲ್ಲಿರುತ್ತವೆ. ಒಂದು ವೇಳೆ ಹೀಗೆ ಆದರೆ, ಆಗ ಸಂಘರ್ಷದ ಸ್ವರೂಪದ ಬದಲಾವಣೆಯನ್ನು ಗಣನೆಗೆ ತೆಗೆದುಕೊಂಡು, ನಮಗೆ ಎದುರಾಗಲಿರುವ ಅಪಾಯದ ಆಧಾರದ ಮೇಲೆ ಸೂಕ್ತ ನಿರ್ಧಾರಗಳನ್ನು ನಾವು ತೆಗೆದುಕೊಳ್ಳಬೇಕಾಗುತ್ತದೆ ಎಂದು ಪುಟಿನ್ ಹೇಳಿದ್ದಾರೆ.
ರಶ್ಯದ ಭೂಪ್ರದೇಶದೊಳಗೆ ಆಳವಾಗಿ ದಾಳಿ ನಡೆಸಲು ಅನುಮತಿಸುವುದು ` ನೇಟೊ ದೇಶಗಳು ಮಿಲಿಟರಿ ಸಂಘರ್ಷದಲ್ಲಿ ನೇರವಾಗಿ ಭಾಗಿಯಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ ಎಂದು ಪುಟಿನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.ಅಮೆರಿಕದ ದೀರ್ಘಶ್ರೇಣಿಯ ಎಟಿಎಸಿಎಂಎಸ್ ಕ್ಷಿಪಣಿ ಹಾಗೂ ಬ್ರಿಟನ್ನ ಸ್ಟಾರ್ಮ್ ಶ್ಯಾಡೊ ಕ್ಷಿಪಣಿಗಳನ್ನು ರಶ್ಯದ ಪ್ರದೇಶದೊಳಗೆ ಪ್ರಯೋಗಿಸಲು ಅವಕಾಶ ನೀಡಬೇಕೆಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ನಿರಂತರ ಆಗ್ರಹಿಸುತ್ತಾ ಬಂದಿದ್ದಾರೆ.
ಬ್ರಿಟನ್ನ ಕ್ಷಿಪಣಿ ಬಳಸಿ ರಶ್ಯದೊಳಗೆ ದಾಳಿ ನಡೆಸುವುದಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸುವುದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪರಿಗಣಿಸುತ್ತಿದ್ದಾರೆ ಎಂದು ಗುರುವಾರ ವರದಿಯಾಗಿದೆ. ರಶ್ಯದೊಳಗೆ ದಾಳಿ ನಡೆಸಲು ದೀರ್ಘ ಶ್ರೇಣಿಯ ಕ್ಷಿಪಣಿ ಬಳಸುವುದಕ್ಕೆ ಇರುವ ನಿರ್ಬಂಧ ತೆರವುಗೊಳಿಸುವ ಬಗ್ಗೆ ತಮ್ಮ ಆಡಳಿತ ಪರಿಶೀಲಿಸುತ್ತಿದೆ ಎಂದು ಬೈಡನ್ ಹೇಳಿದ್ದರು. ಯುದ್ಧ ಭೂಮಿಯಲ್ಲಿ ಪರಿಸ್ಥಿತಿ ಬದಲಾದಂತೆ ತನ್ನ ನೀತಿಯನ್ನು ಹೊಂದಿಕೊಳ್ಳಲು ಯುದ್ಧದ ಮೊದಲ ದಿನದಿಂದಲೂ ಅಮೆರಿಕ ಸಿದ್ಧವಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.
►ಬ್ರಿಟನ್ನ ಸ್ಟಾರ್ಮ್ ಶ್ಯಾಡೊ ಕ್ಷಿಪಣಿ
ಬ್ರಿಟನ್ ಉಕ್ರೇನ್ಗೆ ಒದಗಿಸಿರುವ ಸ್ಟಾರ್ಮ್ ಶ್ಯಾಡೊ ಕ್ಷಿಪಣಿಗಳು ಸುಮಾರು 155 ಮೈಲುಗಳಷ್ಟು ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದ್ದು ಈಗ ಉಕ್ರೇನ್ ಬಳಸುತ್ತಿರುವ ಕ್ಷಿಪಣಿಗಳಿಗಿಂತ 3 ಪಟ್ಟು ಅಧಿಕ ಸಾಮರ್ಥ್ಯ ಹೊಂದಿವೆ. ಅಮೆರಿಕ ಒದಗಿಸಿರುವ ಎಟಿಎಸಿಎಂಎಸ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು 190 ಮೈಲಿಗೂ ಅಧಿಕ ದೂರದ ಗುರಿಯನ್ನು ತಲುಪಬಲ್ಲದು. ಆದರೆ ಈ ಕ್ಷಿಪಣಿಗಳನ್ನು ರಶ್ಯದ ಒಳಗೆ ಪ್ರಯೋಗಿಸಲು ಉಕ್ರೇನ್ಗೆ ಅನುಮತಿ ನೀಡಿದರೆ, ರಶ್ಯವು ನೇಟೊ ವಿರುದ್ಧ ಹೈಪರ್ಸಾನಿಕ್ ಪರಮಾಣು ಕ್ಷಿಪಣಿಗಳನ್ನು ಬಳಸಬಹುದು ಎಂಬ ಭೀತಿಯಿದೆ.