ಏಶ್ಯಾದ ಭದ್ರತೆಗೆ ನೇಟೊದಿಂದ ಬೆದರಿಕೆ : ಪುಟಿನ್ ಆರೋಪ
ರಶ್ಯದ ಪರಮಾಣು ತತ್ವದಲ್ಲಿ ಬದಲಾವಣೆಯ ಎಚ್ಚರಿಕೆ
ಹನೋಯಿ : ನೇಟೊ ಏಶ್ಯದತ್ತ ಮುನ್ನುಗ್ಗುತ್ತಿದ್ದು ಇದು ಏಶ್ಯಾ ಪೆಸಿಫಿಕ್ ವಲಯದಲ್ಲಿ ರಶ್ಯದ ಭದ್ರತೆಗೆ ಬೆದರಿಕೆ ಒಡ್ಡುತ್ತಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದು ಇದಕ್ಕೆ ಪ್ರತಿಯಾಗಿ ರಶ್ಯ ತನ್ನ ಪರಮಾಣು ಸಿದ್ಧಾಂತದಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಏಶ್ಯಾದಲ್ಲಿ ಶಾಶ್ವತವಾಗಿ ನೆಲೆಯೂರುವುದು ನೇಟೊದ ಉದ್ದೇಶವಾಗಿದೆ. ಈ ಬೆದರಿಕೆಗೆ ರಶ್ಯ ಮತ್ತು ಇತರ ದೇಶಗಳು ಸಮರ್ಥವಾಗಿ ಪ್ರತಿಕ್ರಿಯೆ ನೀಡಲಿವೆ. ಏಶ್ಯಾ ಪೆಸಿಫಿಕ್ ವಲಯದಲ್ಲಿ ವಿಶ್ವಾಸಾರ್ಹ ಭದ್ರತಾ ವ್ಯವಸ್ಥೆಯನ್ನು ನಿರ್ಮಿಸಲು ರಶ್ಯ ಮತ್ತು ವಿಯೆಟ್ನಾಮ್ ಆಸಕ್ತಿ ಹೊಂದಿವೆ ಎಂದು ವಿಯೆಟ್ನಾಮ್‍ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಪುಟಿನ್ ಹೇಳಿದ್ದಾರೆ.
ರಶ್ಯ ವಿರುದ್ಧ ದಿಗ್ಬಂಧನ ವಿಧಿಸಿರುವ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಇಂಧನ ಮತ್ತು ಭದ್ರತೆಯ ಕ್ಷೇತ್ರದಲ್ಲಿ ವಿಯೆಟ್ನಾಮ್ ಜತೆ ಪ್ರಮುಖ ಒಪ್ಪಂದಗಳಿಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿ ಹಾಕಿದ್ದಾರೆ. ಅಮೆರಿಕ ನೇತೃತ್ವದ ನೇಟೊ ಒಕ್ಕೂಟಕ್ಕೆ ಪ್ರತಿಯಾಗಿ ರಶ್ಯ, ಉತ್ತರ ಕೊರಿಯಾ, ಚೀನಾ ಸೇರಿದಂತೆ ಬಲಿಷ್ಟ ಒಕ್ಕೂಟವನ್ನು ರಚಿಸುವುದು ಪುಟಿನ್ ಇರಾದೆಯಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಏಶ್ಯಾದಲ್ಲಿ ಸಂಬಂಧಗಳನ್ನು ವರ್ಧಿಸಿಕೊಳ್ಳಲು ಪ್ರಯತ್ನಿಸುತ್ತಿರುವ ರಶ್ಯ, ವಿಯೆಟ್ನಾಮ್‍ಗೆ ನೈಸರ್ಗಿಕ ಅನಿಲ ಸೇರಿದಂತೆ ಪಳೆಯುಳಿಕೆ ಇಂಧನಗಳನ್ನು ದೀರ್ಘಾವಧಿಗೆ ಪೂರೈಸುವ ವಾಗ್ದಾನ ಮಾಡಿದೆ.
ವಿಯೆಟ್ನಾಮ್ ಮತ್ತು ರಶ್ಯಗಳು `ರಕ್ಷಣೆ, ಭದ್ರತೆ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು, ಅಂತರಾಷ್ಟ್ರೀಯ ಕಾನೂನಿನ ಆಧಾರದಲ್ಲಿ ಸಾಂಪ್ರದಾಯಿಕವಲ್ಲದ ಭದ್ರತಾ ಸವಾಲುಗಳನ್ನು ಎದುರಿಸುವ ಬಗ್ಗೆ, ವಲಯದಲ್ಲಿ ಮತ್ತು ವಿಶ್ವದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು' ಬಯಸುತ್ತವೆ ಎಂದು ವಿಯೆಟ್ನಾಮ್ ಅಧ್ಯಕ್ಷ ಟೋ ಲ್ಯಾಮ್ ಹೇಳಿದ್ದಾರೆ.
ಬಲಪ್ರಯೋಗಕ್ಕೆ ಆಸ್ಪದ ನೀಡದ, ಯಾವುದೇ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಸೂಕ್ತ ಮತ್ತು ವಿಶ್ವಾಸಾರ್ಹ ಭದ್ರತಾ ವ್ಯವಸ್ಥೆಯನ್ನು ಏಶ್ಯಾ-ಪೆಸಿಫಿಕ್ ವಲಯದಲ್ಲಿ ರಚಿಸುವ ಬಗ್ಗೆ ಪುಟಿನ್ ಜತೆ ಸಮಾಲೋಚನೆ ನಡೆದಿದೆ ಎಂದವರು ಹೇಳಿದ್ದಾರೆ. ಉಕ್ರೇನ್‍ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧಕ್ಕೆ ಸಂಬಂಧಿಸಿದ ನಿರ್ಣಯದ ಬಗ್ಗೆ ವಿಶ್ವಸಂಸ್ಥೆಯಲ್ಲಿ ನಡೆದ ಮತದಾನದಿಂದ ವಿಯೆಟ್ನಾಮ್ ದೂರ ಉಳಿಯುವ ಮೂಲಕ ಪರೋಕ್ಷವಾಗಿ ರಶ್ಯವನ್ನು ಬೆಂಬಲಿಸಿದೆ.
ಪುಟಿನ್ ಅವರ ವಿಯೆಟ್ನಾಮ್ ಭೇಟಿಯನ್ನು ಟೀಕಿಸಿರುವ ಅಮೆರಿಕ, `ಇದು ರಶ್ಯ ನಡೆಸಿರುವ ಅಂತರಾಷ್ಟ್ರೀಯ ಕಾನೂನು ಉಲ್ಲಂಘನೆಗಳನ್ನು ಸಾಮಾನ್ಯೀಕರಿಸುವ ಸ್ಪಷ್ಟ ಅಪಾಯಕ್ಕೆ ಕಾರಣವಾಗುತ್ತದೆ' ಎಂದಿದೆ.