37 ವರ್ಷ ಹಳೆಯ ಭ್ರಷ್ಟಾಚಾರ ಪ್ರಕರಣದಿಂದ ನವಾಝ್ ಶರೀಫ್ ದೋಷಮುಕ್ತಿ
Nawaz Sharif. (ANI)
ಲಾಹೋರ್: 37 ವರ್ಷ ಹಳೆಯ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ರನ್ನು ದೇಶದ ಅಕೌಂಟಬಿಲಿಟಿ ನ್ಯಾಯಾಲಯವೊಂದು ಶನಿವಾರ ದೋಷಮುಕ್ತಗೊಳಿಸಿದೆ.
ನವಾಝ್ ಶರೀಫ್ ದೇಶದ ಬೃಹತ್ ಮಾಧ್ಯಮ ಕಂಪೆನಿಯೊಂದಕ್ಕೆ ‘‘ಲಂಚ’’ವಾಗಿ ಪಂಜಾಬ್ ರಾಜ್ಯದ ರಾಜಧಾನಿ ಲಾಹೋರ್ ನಲ್ಲಿರುವ ‘‘ಅಮೂಲ್ಯ ಸರಕಾರಿ ಜಾಗ’’ವೊಂದನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ನವಾಝ್ ಶರೀಫ್ ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ ಮುಸ್ಲಿಮ್ ಲೀಗ್- ನವಾಝ್ (PML-N) ಪಕ್ಷದ ಅಧ್ಯಕ್ಷರೂ ಆಗಿದ್ದಾರೆ. ಅವರ ಸಹೋದರ ಶೆಹಬಾಝ್ ಶರೀಫ್ ದೇಶದ ಪ್ರಧಾನಿಯಾಗಿದ್ದಾರೆ.
ಪಾಕಿಸ್ತಾನದ ಒಕ್ಕೂಟ ಸರಕಾರವು, ರಾಜಕಾರಣಿಗಳ ಜೀವಾವಧಿ ನಿಷೇಧವನ್ನು ತೆರವುಗೊಳಿಸಲು ಕಾನೂನುಗಳಿಗೆ ಕೆಲವು ಮಹತ್ವದ ತಿದ್ದುಪಡಿಗಳನ್ನು ತಂದ ದಿನಗಳ ಬಳಿಕ ನ್ಯಾಯಾಲಯ ಈ ತೀರ್ಪು ನೀಡಿದೆ.
ಈ ತೀರ್ಪಿನಿಂದಾಗಿ, 73 ವರ್ಷದ ಮೂರು ಬಾರಿಯ ಪ್ರಧಾನಿ ನವಾಝ್ ಶರೀಫ್ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಸಂಸದೀಯ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ.
ನವಾಝ್ ಶರೀಫ್ರನ್ನು ಸುಪ್ರೀಂ ಕೋರ್ಟ್ 2017ರಲ್ಲಿ ಅನರ್ಹಗೊಳಿಸಿತ್ತು. 2018ರಲ್ಲಿ, ಪನಾಮ ದಾಖಲೆಗಳಲ್ಲಿ ಅವರ ಹೆಸರು ಕಾಣಿಸಿಕೊಂಡ ಬಳಿಕ, ಅವರು ಜೀವನಪರ್ಯಂತ ಯಾವುದೇ ಸರಕಾರಿ ಹುದ್ದೆಯನ್ನು ವಹಿಸದಂತೆ ಸುಪ್ರೀಂ ಕೋರ್ಟ್ ನಿಷೇಧ ಹೇರಿತ್ತು.
‘‘37 ವರ್ಷಗಳ ಹಿಂದೆ ನವಾಝ್ ಶರೀಫ್ ಪಂಜಾಬ್ ನ ಮುಖ್ಯಮಂತ್ರಿಯಾಗಿದ್ದಾಗ, ಜಾಂಗ್/ಜಿಯೊ ಮಾಧ್ಯಮ ಗುಂಪಿನ ಮಾಲೀಕ ಮಿರ್ ಶಾಕಿಲ್-ಉರ್-ರೆಹಮಾನ್ ಗೆ ಲಾಹೋರ್ ನಲ್ಲಿರುವ ಅತ್ಯಂತ ಬೆಲೆಬಾಳುವ 6.75 ಎಕರೆ ಸರಕಾರಿ ಭೂಮಿಯನ್ನು ಅಕ್ರಮವಾಗಿ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಲಾಹೋರ್ ನಲ್ಲಿರುವ ಅಕೌಂಟಬಿಲಿಟಿ ನ್ಯಾಯಾಲಯವೊಂದು ಶರೀಫ್ ರನ್ನು ದೋಷಮುಕ್ತಗೊಳಿಸಿದೆ’’ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.